ಕರ್ನಾಟಕ

karnataka

ಸಿರಿಯಾ ನಿರಾಶ್ರಿತರು ತವರಿಗೆ ಮರಳುವಂತೆ ಮಾಡಿ; ಅಂತಾರಾಷ್ಟ್ರೀಯ ಸಮುದಾಯಕ್ಕೆ ಜೋರ್ಡಾನ್ ಮನವಿ

By ETV Bharat Karnataka Team

Published : Aug 23, 2023, 2:18 PM IST

ಜೋರ್ಡಾನ್​ನಲ್ಲಿ ಆಶ್ರಯ ಪಡೆದಿರುವ ಸಿರಿಯಾ ನಿರಾಶ್ರಿತರು ತಮ್ಮ ದೇಶಕ್ಕೆ ಮರಳುವಂತೆ ಸೂಕ್ತ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಜೋರ್ಡಾನ್ ಮನವಿ ಮಾಡಿದೆ.

Jordan urges int'l support to ensure voluntary return
Jordan urges int'l support to ensure voluntary return

ಅಮ್ಮಾನ್: ಸಿರಿಯನ್ ನಿರಾಶ್ರಿತರು ಸ್ವಯಂಪ್ರೇರಿತವಾಗಿ ತಮ್ಮ ದೇಶಕ್ಕೆ ಮರಳಲು ಸಾಧ್ಯವಾಗುವಂತೆ ಅಂತಾರಾಷ್ಟ್ರೀಯ ಸಮುದಾಯವು ಪ್ರಾಯೋಗಿಕ ಮತ್ತು ತಕ್ಷಣದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜೋರ್ಡಾನ್ ಒತ್ತಿ ಹೇಳಿದೆ. ಅಮ್ಮಾನ್​ನಲ್ಲಿ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್ಎಚ್​ಸಿಆರ್​) ಫಿಲಿಪ್ಪೊ ಗ್ರಾಂಡಿ ಅವರೊಂದಿಗಿನ ಸಭೆಯಲ್ಲಿ ಜೋರ್ಡಾನ್ ವಿದೇಶಾಂಗ ಸಚಿವ ಐಮಾನ್ ಸಫಾದಿ ಈ ಹೇಳಿಕೆ ನೀಡಿದ್ದಾರೆ. ಅಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಿತ ಯುಎನ್ ಏಜೆನ್ಸಿಗಳಿಗೆ ಅವರು ಕರೆ ನೀಡಿದ್ದಾರೆ ಎಂದು ಜೋರ್ಡಾನ್ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಸಿರಿಯನ್ ನಿರಾಶ್ರಿತರ ಭವಿಷ್ಯವು ಅವರ ಸ್ವಂತ ದೇಶದಲ್ಲಿದೆ, ಹೊರತು ಜೋರ್ಡಾನ್​ನಲ್ಲಿ ಅಲ್ಲ. ಆದರೆ, ಅವರಿಗೆ ಯೋಗ್ಯವಾದ ಜೀವನ ಪರಿಸ್ಥಿತಿಗಳನ್ನು ನಿರ್ಮಿಸುವುದು ಅನಿವಾರ್ಯವಾಗಿದೆ ಎಂದು ಸಫಾದಿ ಹೇಳಿದರು. ಸಭೆಯಲ್ಲಿ, ನಿರಾಶ್ರಿತರ ಮರಳುವಿಕೆಗೆ ಅಗತ್ಯ ಖಾತರಿಗಳನ್ನು ನೀಡುವ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಸ್ಥಾಪಿಸುವ ಬಗ್ಗೆ ಸಿರಿಯಾ ಸರ್ಕಾರದೊಂದಿಗೆ ಸೌದಿ ಅರೇಬಿಯಾ ಮತ್ತು ಯುಎನ್ಎಚ್​ಸಿಆರ್​ ಇತ್ತೀಚೆಗೆ ನಡೆಸಿದ ಮಾತುಕತೆಯ ಫಲಿತಾಂಶಗಳ ಬಗ್ಗೆ ಚರ್ಚಿಸಲಾಯಿತು.

ಸಿರಿಯನ್ ನಿರಾಶ್ರಿತರಿಗೆ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಕಡಿಮೆಯಾಗುತ್ತಿರುವುದು ಮತ್ತು ನಿರಾಶ್ರಿತರಿಗೆ ಆಶ್ರಯ, ವೈದ್ಯಕೀಯ ಮತ್ತು ಶೈಕ್ಷಣಿಕ ಸೇವೆಗಳನ್ನು ಒದಗಿಸುವುದನ್ನು ರಾಷ್ಟ್ರಗಳು ನಿಲ್ಲಿಸುತ್ತಿರುವುದರಿಂದ ಅಪಾಯಕಾರಿ ಪರಿಣಾಮಗಳು ಉಂಟಾಗುತ್ತಿರುವ ಬಗ್ಗೆ ಸಫಾದಿ ಮತ್ತು ಗ್ರಾಂಡಿ ಚರ್ಚಿಸಿದರು. ಸಿರಿಯಾ ನಿರಾಶ್ರಿತರಿಗೆ ಆತಿಥ್ಯ ನೀಡುವ ತನ್ನ ಸಾಮರ್ಥ್ಯ ಮೀರಿಹೋಗಿದೆ ಹಾಗೂ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಬೆಂಬಲವಿಲ್ಲದೆ ಸಿರಿಯಾ ನಿರಾಶ್ರಿತರಿಗೆ ಸಹಾಯ ಮಾಡಲು ಸಾಧ್ಯವಾಗದು ಎಂದು ಸಫಾದಿ ಹೇಳಿದರು.

ನಿರಾಶ್ರಿತರಿಗೆ ಆತಿಥ್ಯ ನೀಡುವಲ್ಲಿ ಮತ್ತು ಅವರಿಗೆ ಉತ್ತಮ ಜೀವನವನ್ನು ಒದಗಿಸುವಲ್ಲಿ ಜೋರ್ಡಾನ್ ನ ಮಾನವೀಯ ಪಾತ್ರವನ್ನು ಗ್ರಾಂಡಿ ಶ್ಲಾಘಿಸಿದರು. ಡಿಸೆಂಬರ್ ನಲ್ಲಿ ಜಿನೀವಾದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಯುಎನ್ ಎಚ್ ಸಿಆರ್ ಆಯೋಜಿಸಲಿರುವ 2023 ಜಾಗತಿಕ ನಿರಾಶ್ರಿತರ ವೇದಿಕೆಯ ಸಿದ್ಧತೆಯ ಬಗ್ಗೆಯೂ ಅವರು ಚರ್ಚಿಸಿದರು. ಮಂಗಳವಾರ, ಜೋರ್ಡಾನ್​ನ ಕಿಂಗ್​ ಅಬ್ದುಲ್ಲಾ-2 ಅಮ್ಮಾನ್​ನಲ್ಲಿ ಗ್ರಾಂಡಿ ಅವರನ್ನು ಭೇಟಿಯಾಗಿ ನಿರಾಶ್ರಿತರ ಆತಿಥೇಯ ದೇಶಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ತನ್ನ ಜವಾಬ್ದಾರಿಗಳನ್ನು ಹೊರುವ ಅಗತ್ಯವನ್ನು ಚರ್ಚಿಸಿದರು ಎಂದು ರಾಯಲ್ ಕೋರ್ಟ್ ಹೇಳಿಕೆ ತಿಳಿಸಿದೆ.

ಸಿರಿಯಾ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ: ಸಿರಿಯಾದ ರಾಜಧಾನಿ ಡಮಾಸ್ಕಸ್ ಬಳಿ ಇಸ್ರೇಲ್ ಕ್ಷಿಪಣಿ ದಾಳಿಯಿಂದ ಸೈನಿಕನೊಬ್ಬ ಗಾಯಗೊಂಡಿದ್ದಾನೆ ಎಂದು ಸಿರಿಯನ್ ಸರ್ಕಾರಿ ಮಾಧ್ಯಮ ಸಂಸ್ಥೆ ಸನಾ ತಿಳಿಸಿದೆ. ಸಿರಿಯಾದಲ್ಲಿ ಇರಾನ್​​ ಪಾಲ್ಗೊಳ್ಳುವಿಕೆಯನ್ನು ತಡೆಗಟ್ಟಲು ಪ್ರಯತ್ನಿಸುತ್ತಿರುವ ನಿಟ್ಟಿನಲ್ಲಿ ಇಸ್ರೇಲ್ ಸಿರಿಯಾ ಮೇಲೆ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ. "ಆಕ್ರಮಿತ ಗೋಲನ್ ಹೈಟ್ಸ್​ ಪ್ರದೇಶದಿಂದ ಇಸ್ರೇಲಿ ಶತ್ರುಗಳು ದಾಳಿ ನಡೆಸಿದರು" ಎಂದು ಸನಾ ಹೇಳಿದೆ.

2011 ರಲ್ಲಿ ಸಿರಿಯಾದಲ್ಲಿ ಅಂತರ್ಯುದ್ಧ ಪ್ರಾರಂಭವಾದಾಗಿನಿಂದ, ದೇಶವು ಇರಾನ್ ಮತ್ತು ಇಸ್ರೇಲ್ ನಡುವಿನ ವಿಶಾಲವಾದ, ದೀರ್ಘಕಾಲದ ಪರೋಕ್ಷ ಯುದ್ಧಕ್ಕೆ ಸಮರ ಭೂಮಿಯಾಗಿದೆ. ಇರಾನ್ ಮತ್ತು ಅದರ ಲೆಬನಾನ್ ಮಿತ್ರ ಹೆಜ್ಬುಲ್ಲಾ ಅಂತರ್ಯುದ್ಧದ ಸಮಯದಲ್ಲಿ ತೊಂದರೆಗೀಡಾದ ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಸರ್ಕಾರವನ್ನು ಬೆಂಬಲಿಸಿ, ತರಬೇತಿ ಮತ್ತು ಯೋಧರನ್ನು ಒದಗಿಸಿವೆ.

ಇದನ್ನೂ ಓದಿ : ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ; ವಿಮಾನಕ್ಕೆ ಹಾನಿ

ABOUT THE AUTHOR

...view details