ಬರ್ಲಿನ್( ಜರ್ಮನಿ):ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕಾಗಿ ಚೀನಾ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದರೆ ಅದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಹೇಳಿದ್ದಾರೆ. ರಷ್ಯಾಗೆ ಬೀಜಿಂಗ್ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾರದು ಎಂದು ನಾವು ಭಾವಿಸುತ್ತೇವೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿಯಾದ ಎರಡು ದಿನಗಳ ನಂತರ ಭಾನುವಾರ ಪ್ರಸಾರವಾದ ಮಾಧ್ಯಮ ಸಂದರ್ಶನದಲ್ಲಿ ಸ್ಕೋಲ್ಜ್ ಈ ಹೇಳಿಕೆಗಳನ್ನು ನೀಡಿದ್ದಾರೆ.
ಒಂದು ವೇಳೆ ಚೀನಾ ರಷ್ಯಾಗೆ ಸಹಾಯ ಮಾಡಿದಲ್ಲಿ ಅದರ ಮೇಲೆ ನಿರ್ಬಂಧಗಳನ್ನು ಹೇರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಕೋಲ್ಜ್, ಇದಕ್ಕೆ ಅದರದೇ ಆದ ಪರಿಣಾಮಗಳಿರುತ್ತವೆ ಎಂದು ನಾನು ಭಾವಿಸುತ್ತೇನೆ. ಆದರೆ, ಇದು ಸಂಭವಿಸಬಾರದು ಎಂದು ನಾವು ಸ್ಪಷ್ಟಪಡಿಸುವ ಹಂತದಲ್ಲಿ ನಾವು ಈಗ ಇದ್ದೇವೆ. ಹಾಗೆಯೇ ಈ ವಿಷಯದಲ್ಲಿ ನಮ್ಮ ಮನವಿಯನ್ನು ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ನಾವು ಆಶಾವಾದಿಯಾಗಿದ್ದೇವೆ. ಆದಾಗ್ಯೂ ಈ ವಿಷಯದ ಬಗ್ಗೆ ನಾವು ಗಮನವಿಟ್ಟಿರಬೇಕು ಹಾಗೂ ಸಾಕಷ್ಟು ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.
ಇಷ್ಟಾದರೂ ಸ್ಕೋಲ್ಜ್ ಪರಿಣಾಮಗಳ ಬಗ್ಗೆ ವಿವರಣೆ ನೀಡಲಿಲ್ಲ. ಜರ್ಮನಿ ಯುರೋಪಿನ ಅತಿದೊಡ್ಡ ಆರ್ಥಿಕತೆಯಾಗಿದೆ ಹಾಗೂ ಅದೇ ಸಮಯದಲ್ಲಿ ಜರ್ಮನಿ ಚೀನಾದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಇನ್ನು ಭಾನುವಾರ ಜರ್ಮನಿಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರನ್ನು ಸ್ಕೋಲ್ಜ್ ಭೇಟಿಯಾಗಿದ್ದರು. ರಷ್ಯಾಗೆ ಚೀನಾ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿದೆ ಎಂದು ಅಮೆರಿಕದಿಂದ ನಿಮಗೆ ವಿಶ್ವಾಸಾರ್ಹ ಮಾಹಿತಿ ಏನಾದರೂ ಬಂದಿದೆಯಾ ಹಾಗೂ ಒಂದು ವೇಳೆ ಚೀನಾ ರಷ್ಯಾಗೆ ಸಹಾಯ ಮಾಡಿದಲ್ಲಿ ನೀವು ಚೀನಾ ವಿರುದ್ಧ ಆರ್ಥಿಕ ನಿರ್ಬಂಧ ಹೇರುವ ಕ್ರಮಗಳನ್ನು ಬೆಂಬಲಿಸುವಿರಾ ಎಂದು ಈ ಸಂದರ್ಭದಲ್ಲಿ ಸ್ಕೋಲ್ಜ್ ಅವರಿಗೆ ಪ್ರಶ್ನಿಸಲಾಯಿತು.