ಗಾಜಾ ಪಟ್ಟಿ:ಇಸ್ರೇಲ್ನ ಸತತ ದಾಳಿಯಿಂದ ಗಾಜಾಪಟ್ಟಿ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಮೂಲಸೌಕರ್ಯಗಳ ಕೊರತೆಯಿಂದ ನಿರಾಶ್ರಿತರ ಶಿಬಿರಗಳು, ಆಸ್ಪತ್ರೆಗಳು ನಲುಗುತ್ತಿವೆ. ಇಲ್ಲಿನ ಪ್ರಮುಖ ಆಸ್ಪತ್ರೆಗಳು ಸೇರಿದಂತೆ ಹಲವೆಡೆ ಇಂಧನ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗಾಯಾಳುಗಳು, ರೋಗಿಗಳು ಸಾವಿಗೀಡಾಗುತ್ತಿದ್ದಾರೆ.
ಪ್ಯಾಲೆಸ್ಟೈನಿಯನ್ ನಾಗರಿಕರನ್ನು ರಕ್ಷಿಸಲು ಸೌಕರ್ಯಗಳನ್ನು ಸರಬರಾಜಿಗೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಸಲಹೆಯನ್ನು ಇಸ್ರೇಲ್ ತಿರಸ್ಕರಿಸಿದ್ದು, ಅದರ ಸೇನಾ ಪಡೆಗಳು ಗಾಜಾದ ಅತಿದೊಡ್ಡ ಆಸ್ಪತ್ರೆಯನ್ನು ಸುತ್ತುವರೆದಿವೆ. ಹಮಾಸ್ ಉಗ್ರರು ಆಸ್ಪತ್ರೆಯನ್ನು ಬಂಕರ್ ಆಗಿ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅದರ ಸುತ್ತಲೂ ದಾಳಿ ನಡೆಸಲಾಗಿದೆ. ಆದರೆ, ಅಲ್ಲಿನ ವೈದ್ಯರು ಹೇಳುವಂತೆ ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ಇದ್ದ ಕೊನೆಯ ಜನರೇಟರ್ ಕೂಡ ಖಾಲಿಯಾಗಿದ್ದು, ಜನಿಸಿದ ಮಗು ಸೇರಿದಂತೆ 5 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಆಸ್ಪತ್ರೆತ ಕೆಳಗೆ ಹಮಾಸ್ ಬಂಕರ್:ಗಾಜಾದ ಮುಖ್ಯ ಆಸ್ಪತ್ರೆಯಾದ ಶಿಫಾವನ್ನು ಹಮಾಸ್ ಸಂಘಟನೆಯ ಮುಖ್ಯ ಕಮಾಂಡ್ ಪೋಸ್ಟ್ ಆಗಿಸಿಕೊಳ್ಳಲಾಗಿದೆ. ಉಗ್ರಗಾಮಿಗಳು ರೋಗಿಗಳನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದ್ದಾರೆ ಮತ್ತು ಅದರ ಕೆಳಗೆ ವಿಸ್ತಾರವಾದ ಬಂಕರ್‌ಗಳನ್ನು ಸ್ಥಾಪಿಸಿದ್ದಾರೆ ಎಂದು ಇಸ್ರೇಲ್ ಹೇಳುತ್ತಿದೆ. ಉತ್ತರ ಗಾಜಾದಲ್ಲಿನ ಶಿಫಾ ಮತ್ತು ಇತರ ಆಸ್ಪತ್ರೆಗಳ ಸುತ್ತ ಇಸ್ರೇಲ್ ಪಡೆಗಳು ದಾಳಿ ನಡೆಸುತ್ತಿವೆ. ಇದರಿಂದ ವೈದ್ಯಕೀಯ ಸಲಕರಣೆಗಳು ಸೇರಿದಂತೆ ಎಲ್ಲ ಸರಬರಾಜು ನಿಂತು ಹೋಗಿದೆ.
ವಿದ್ಯುತ್ ಸರಬರಾಜು ನಿಂತಿದೆ. ವೈದ್ಯಕೀಯ ಸಾಧನಗಳೂ ಇಲ್ಲವಾಗಿವೆ. ಸಾಮಾನ್ಯ ರೋಗಿಗಳ ಜೊತೆಗೆ ತೀವ್ರ ನಿಗಾ ಘಟಕದಲ್ಲಿದ್ದವರಿಗೆ ಸಾವಿನ ಭೀತಿ ಇದೆ. ಇಸ್ರೇಲ್ ಪಡೆಗಳು ಸುತ್ತಲೂ ಗುಂಡಿನ ದಾಳಿ ನಡೆಸುತ್ತಿವೆ ಎಂದು ಶಿಫಾ ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸೆಲ್ಮಿಯಾ ತಿಳಿಸಿದರು.