ಜೆರುಸಲೇಂ: ಹಮಾಸ್ ನಿರಂತರವಾಗಿ ಪ್ರತಿದಿನ 10 ಜೀವಂತ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಆ ದಿನ ಕದನ ವಿರಾಮ ವಿಸ್ತರಣೆಯಾಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹಿರಿಯ ಸಲಹೆಗಾರ ಮಾರ್ಕ್ ರೆಗೆವ್ ಗುರುವಾರ ಹೇಳಿದ್ದಾರೆ. ಏಳನೇ ದಿನಕ್ಕೆ ಕದನ ವಿರಾಮ ವಿಸ್ತರಿಸಲು ಮಾತುಕತೆಗಳು ನಡೆಯುತ್ತಿರುವ ಮಧ್ಯೆ ಇಸ್ರೇಲ್ನ ಹಿರಿಯ ಅಧಿಕಾರಿಯ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಈಗ ಜಾರಿಯಲ್ಲಿರುವ ಕದನ ವಿರಾಮವು ಬೆಳಿಗ್ಗೆ 7 ಗಂಟೆಗೆ (ಸ್ಥಳೀಯ ಸಮಯ) ಮುಕ್ತಾಯಗೊಳ್ಳುವ ಕೆಲವೇ ನಿಮಿಷಗಳ ಮೊದಲು ಈ ಪ್ರಕಟಣೆ ಹೊರಬಿದ್ದಿದೆ. ಗುರುವಾರದ ವಿಸ್ತರಣೆಯು ನವೆಂಬರ್ 24 ರಂದು ಪ್ರಾರಂಭವಾದ ಆರಂಭಿಕ ನಾಲ್ಕು ದಿನಗಳ ಕದನ ವಿರಾಮದ ಎರಡನೇ ವಿಸ್ತರಣೆಯಾಗಿದೆ.
"ಕದನ ವಿರಾಮದ ಬಗ್ಗೆ ಇಸ್ರೇಲ್ನ ನಿಲುವು ತುಂಬಾ ಸ್ಪಷ್ಟವಾಗಿದೆ. ಪ್ರತಿದಿನ 10 ಜೀವಂತ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುವುದನ್ನು ಮುಂದುವರೆಸಿದರೆ ಕದನ ವಿರಾಮ ಮುಂದುವರಿಯುತ್ತ ಸಾಗುತ್ತದೆ" ಎಂದು ರೆಗೆವ್ ಸಿಎನ್ಎನ್ಗೆ ತಿಳಿಸಿದರು. ಮುಂದಿನ 24 ಗಂಟೆಗಳಲ್ಲಿ ಹೋರಾಟ ಪುನರಾರಂಭಗೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, "10 ಇಸ್ರೇಲಿಗಳನ್ನು ಬಿಡುಗಡೆ ಮಾಡುವ ಷರತ್ತು ಪೂರೈಸಲು ಹಮಾಸ್ ವಿಫಲವಾದರೆ ಖಂಡಿತವಾಗಿಯೂ ಹೋರಾಟ ಪುನಾರಂಭವಾಗುತ್ತದೆ" ಎಂದು ಹೇಳಿದರು. ರೆಗೆವ್ ಪ್ರಕಾರ, ಗಾಝಾದೊಳಗೆ ಇನ್ನೂ ಕನಿಷ್ಠ 140 ಒತ್ತೆಯಾಳುಗಳು ಇದ್ದಾರೆ.