ಜರ್ಮನಿ:ವಿವಿಧ ದೇಶಗಳಿಗೆ ಸಾಲ ನೀಡಿ ಅವುಗಳ ಮೇಲೆ ಸವಾರಿ ಮಾಡುವ ಚೀನಾಗೆ ಸೆಡ್ಡು ಹೊಡೆಯಲು ಭಾರತ, ಅಮೆರಿಕ, ಜರ್ಮನಿ, ಫ್ರಾನ್ಸ್ ಸೇರಿದಂತೆ ಜಿ 7 ರಾಷ್ಟ್ರಗಳು 'ಗೇಮ್ ಚೇಂಜಿಂಗ್ ಯೋಜನೆ'ಯನ್ನು ಅನಾವರಣಗೊಳಿಸಿವೆ.
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೂಡಿಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯಾದ 'ಜಾಗತಿಕ ಮೂಲಸೌಕರ್ಯಕ್ಕಾಗಿ ಪಾಲುದಾರಿಕೆ(ಪಿಜಿಐಐ) ಯೋಜನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಿ7 ನಾಯಕರು ಔಪಚಾರಿಕವಾಗಿ ಹಸಿರು ನಿಶಾನೆ ತೋರಿಸಿದರು.
2027 ರ ವೇಳೆಗೆ ಅಂದರೆ 5 ವರ್ಷಗಳಲ್ಲಿ ಜಿ 7 ಮತ್ತು ಆಹ್ವಾನಿತ ರಾಷ್ಟ್ರಗಳು ಸೇರಿದಂತೆ 600 ಬಿಲಿಯನ್ ಡಾಲರ್ ಹಣವನ್ನು ಹೊಂದಿಸಿ, ಅದನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಗತ್ಯವಿರುವ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಲು ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಹೂಡಿಕೆ ಮಾಡಲು 'ಜಾಗತಿಕ ಮೂಲಸೌಕರ್ಯಕ್ಕಾಗಿ ಪಾಲುದಾರಿಕೆ'(ಪಿಜಿಐಐ) ಯೋಜನೆಗೆ ಜಿ 7 ನಾಯಕರು ವಾಗ್ದಾನ ಮಾಡಿದರು.
ಬಳಿಕ ಮಾತನಾಡಿದ ಜೋ ಬೈಡನ್, ಈ ಯೋಜನೆಯು ಎಲ್ಲ ರಾಷ್ಟ್ರಗಳ ಆದಾಯವನ್ನು ಹೆಚ್ಚಿಸುತ್ತದೆ. 2027 ರ ವೇಳೆಗೆ ಜಿ7 ನಿಂದ ಸುಮಾರು 600 ಬಿಲಿಯನ್ ಡಾಲರ್ ಹಣವನ್ನು ಸಜ್ಜುಗೊಳಿಸುವ ಗುರಿ ಹೊಂದಿದ್ದೇವೆ. ಇದು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿ ಜನರ ಜೀವನವನ್ನು ಸುಧಾರಿಸುತ್ತದೆ ಎಂದರು.
ಚೀನಾದ ಬೆಲ್ಟ್ ಅಂಡ್ ರೋಡ್ಗೆ ಪರ್ಯಾಯ:ಡ್ರ್ಯಾಗನ್ ರಾಷ್ಟ್ರ ಚೀನಾ ಬೆಲ್ಟ್ ಅಂಡ್ ರೋಡ್(ಬಿಆರ್ಐ) ಯೋಜನೆಯಡಿ ವಿವಿಧ ರಾಷ್ಟ್ರಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಇದನ್ನು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು 2013 ರಲ್ಲಿ ಜಾರಿಗೆ ತಂದರು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬಂದರು, ರಸ್ತೆ ಮತ್ತು ಸೇತುವೆಗಳಂತಹ ಮೂಲಸೌಕರ್ಯಗಳನ್ನು ನಿರ್ಮಿಸಲು ಈ ಯೋಜನೆಯಡಿ ಹಣಕಾಸು ಒದಗಿಸುತ್ತದೆ.
ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಚೀನಾದ ಈ ಯೋಜನೆಯ ಮೇಲೆ ಟೀಕೆಯೂ ಇದೆ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಲದ ಮಾದರಿಯಲ್ಲಿ ಹಣದ ನೆರವು ನೀಡಿ, ಆ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ ಸವಾರಿ ಮಾಡುತ್ತದೆ. ಸಾಲ ಮರುಪಾವತಿ ಮಾಡುವಲ್ಲಿ ಸೋಲುವ ದೇಶಗಳ ಪ್ರಮುಖ ಸ್ವತ್ತುಗಳನ್ನು ಬಿಟ್ಟುಕೊಡುವಂತೆ ಒತ್ತಡ ಹೇರುತ್ತದೆ. ಶ್ರೀಲಂಕಾ, ಥೈವಾನ್ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಚೀನಾ ಇದೇ ರೀತಿಯ ಅಸ್ತ್ರ ಪ್ರಯೋಗಿಸಿದೆ.