ಪ್ಯಾರಿಸ್ (ಫ್ರಾನ್ಸ್): ಪ್ರಧಾನಿ ಮೋದಿ ಅವರ ಫ್ರಾನ್ಸ್ ಭೇಟಿಯು ಪೂರ್ಣಗೊಂಡಿದ್ದು, ಅಬುದಾಬಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ ಮುನ್ನ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿಯವರು ತಮ್ಮ ಸ್ನೇಹದ ಭೇಟಿಯ ಸವಿನೆನಪಿಗಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ತಮ್ಮ ಸೆಲ್ಫಿ ಫೋಟೋವನ್ನು ಇಮ್ಯಾನುಯೆಲ್ ಮ್ಯಾಕ್ರನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಭಾರತ ಮತ್ತು ಫ್ರಾನ್ಸ್ ನಡುವಿನ ಸ್ನೇಹ ಚಿರಾಯುವಾಗಲಿ!" ಎಂದು ಫ್ರೆಂಚ್, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ. ಮ್ಯಾಕ್ರನ್ ಅವರ ಟ್ವೀಟ್‌ಗೆ ಪ್ರಧಾನಿ ಮೋದಿ ಫ್ರೆಂಡ್ಸ್ ಫಾರೆವರ್(Friends Forever) ಎಂದು ರಿಟ್ವೀಟ್ ಮಾಡಿದ್ದಾರೆ.
ಜತೆಗೆ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಫ್ರಾನ್ಸ್ ಭೇಟಿಯ ಕುರಿತಾದ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ' ಫ್ರಾನ್ಸ್ ಭೇಟಿಯು ನನಗೆ ಸ್ಮರಣೀಯವಾಗಿದೆ. ನನಗೆ ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಇನ್ನು, ಪರೇಡ್‌ನಲ್ಲಿ ಭಾರತೀಯ ಸೇನಾ ತುಕಡಿ ಭಾಗವಹಿಸುವುದನ್ನು ನೋಡಿ ಹೆಮ್ಮೆಯಾಗಿದೆ ಮತ್ತು ಪರೇಡ್ ಅದ್ಭುತವಾಗಿತ್ತು. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಹಾಗು ಫ್ರೆಂಚ್ ಜನರ ಆತಿಥ್ಯಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನಮ್ಮ ಸ್ನೇಹ ಹೀಗೆ ಮುಂದುವರೆಯಲಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ನಲ್ಲಿ ನಾನು ಮತ್ತು ಇಮ್ಯಾನುಯೆಲ್ ಮ್ಯಾಕ್ರನ್ ವ್ಯಾಪಾರ ಸಹಕಾರವನ್ನು ವೈವಿಧ್ಯಗೊಳಿಸುವ ಮಾರ್ಗಗಳನ್ನು ಚರ್ಚಿಸಲು ಉನ್ನತ ಮಟ್ಟದ CEO ಗಳನ್ನು ಭೇಟಿಯಾದೆವು. ಅಲ್ಲಿ ಭಾರತದಲ್ಲಿನ ಸುಧಾರಣೆಗಳನ್ನು ವಿವರಿಸಿದೆ, ಜೊತೆಗೆ ನಮ್ಮ ರಾಷ್ಟ್ರವು ನೀಡುವ ಅನೇಕ ಅವಕಾಶಗಳನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ. ಅಲ್ಲದೆ, ನನ್ನ ಸ್ನೇಹಿತನಾದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ನೊಂದಿಗೆ ಭಾರತ-ಫ್ರಾನ್ಸ್ ಸಂಬಂಧಗಳ ಕುರಿತಾಗಿ ಮಾತುಕತೆ ನಡೆಸಿದ್ದೇವೆ. ಭಾರತ ಮತ್ತು ಫ್ರಾನ್ಸ್ ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಶಕ್ತಿ ಸಂಪನ್ಮೂಲ, ಕೃತಕ ಬುದ್ಧಿಮತ್ತೆ ಮುಂದಾದವುಗಳ ಕ್ಷೇತ್ರಗಳಲ್ಲಿ ಸಹಕಾರ ನೀಡಲಿದ್ದು, ಇದರ ಪ್ರಾರಂಭಿಸುವ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.