ಇಸ್ಲಾಮಾಬಾದ್ (ಪಾಕಿಸ್ತಾನ): 'ಪಾಕಿಸ್ತಾನವು 1947ರಲ್ಲಿ ಸ್ವತಂತ್ರ ರಾಷ್ಟ್ರವಾಗಿದೆ. ಆದರೆ, ಇವತ್ತು ಮತ್ತೆ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಬೇಕಿದೆ.' ಇವು ಪಾಕಿಸ್ತಾನದ ಪದಚ್ಯುತಿ ಪ್ರಧಾನಿ ಇಮ್ರಾನ್ ಖಾನ್ ಮಾತುಗಳು.
'ಪಾಕಿಸ್ತಾನವು 1947ರಲ್ಲಿ ಸ್ವತಂತ್ರ ರಾಷ್ಟ್ರವಾಗಿದೆ. ಆದರೆ, ಇವತ್ತು ಅಧಿಕಾರ ಬದಲಾವಣೆಯಲ್ಲಿ ನಡೆದ ವಿದೇಶಿ ಷಡ್ಯಂತ್ರದ ವಿರುದ್ಧ ಮತ್ತೆ ಸ್ವಾತಂತ್ರ್ಯ ಹೋರಾಟ ಆರಂಭಿಸಬೇಕಿದೆ. ದೇಶದ ಜನರು ಯಾವಾಗಲೂ ತಮ್ಮ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡ ನಂತರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸಂಸದೀಯ ಮಂಡಳಿ ಸಭೆಯನ್ನು ನಡೆಸಿದರು. ಇತ್ತ, ಸಂಸತ್ತಿನ ಉಪ ಸ್ಪೀಕರ್ ಖಾಸೀಂ ಸುರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಅವರು ರಾಜೀನಾಮೆ ನೀಡಿಲ್ಲ ಎಂದು ಸಂಸತ್ತಿನ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ.
ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ರವಿವಾರ ರಾತ್ರಿ ಮತದಾನ ನಡೆದಿತ್ತು. ಒಟ್ಟಾರೆ 342 ಮತಗಳ ಪೈಕಿ 174 ಮತಗಳು ಅವಿಶ್ವಾಸ ನಿರ್ಣಯದ ಪರವಾಗಿ ಬಿದ್ದಿದ್ದವು. ಈ ಮೂಲಕ ಅವಿಶ್ವಾಸ ನಿರ್ಣಯದಲ್ಲಿ ಸೋಲು ಕಂಡಿರುವ ಪಾಕಿಸ್ತಾನದ ಮೊದಲ ಪ್ರಧಾನಿ ಎಂಬ ಅಪಖ್ಯಾತಿಗೂ ಇಮ್ರಾನ್ ಖಾನ್ ಒಳಗಾಗಿದ್ದಾರೆ.
ಇದನ್ನೂ ಓದಿ:ಅವಿಶ್ವಾಸ ಮತದಲ್ಲಿ ಸೋತ ಇಮ್ರಾನ್ ಖಾನ್.. ಪಾಕ್ ಇತಿಹಾಸದಲ್ಲೇ ಪ್ರಧಾನಿಗೆ ದೊಡ್ಡ ಮುಖಭಂಗ