ನ್ಯೂಯಾರ್ಕ್:ಅಮೆರಿಕದ ಪ್ರಮುಖ ಮಾಧ್ಯಮಗಳಲ್ಲಿ ಒಂದಾದ ಫಾಕ್ಸ್ ನ್ಯೂಸ್ ಅಧ್ಯಕ್ಷ ಜೋ ಬೈಡನ್ರನ್ನು ಸರ್ವಾಧಿಕಾರಿ (ವನ್ನಾಬೇ ಡಿಕ್ಟೇಟರ್) ಎಂದು ಜರಿದು ಸುದ್ದಿ ಮಾಡಿದ್ದು, ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಅಪಮಾನಕರ ಪದ ಪ್ರಯೋಗದ ಬಗ್ಗೆ ಸುದ್ದಿಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ ಪ್ರವೇಶ ರಂಗೇರಿಸಿದೆ. ಗೌಪ್ಯ ದಾಖಲೆ ಕದ್ದೊಯ್ದ ಆರೋಪದ ಮೇಲೆ ಮೊನ್ನೆಯಷ್ಟೇ ಟ್ರಂಪ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು. ಇದರ ಬಳಿಕ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಟ್ರಂಪರ್ನ್ನು ಬೆಂಬಲಿಸುವ ಭರದಲ್ಲಿ ಫಾಕ್ಸ್ ನ್ಯೂಸ್ ಅಧ್ಯಕ್ಷ ಜೋ ಬೈಡನ್ರನ್ನು ಟೀಕಿಸಿ ವರದಿ ಭಿತ್ತರಿಸಿತ್ತು.
ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್ ಅವರು ಭಾಷಣ ಮಾಡುತ್ತಿದ್ದ ದೃಶ್ಯವನ್ನು ಎರಡು ಬದಿಯಲ್ಲಿ ತೋರಿಸುತ್ತಾ, 'ತನ್ನ ರಾಜಕೀಯ ಪ್ರತಿಸ್ಪರ್ಧಿಯ ಬಂಧನದ ಬಳಿಕ ದೇಶದ ಸರ್ವಾಧಿಕಾರಿಯಾಗಲು ಬಯಸುವ ವ್ಯಕ್ತಿ ಶ್ವೇತಭವನದಲ್ಲಿ ಮಾತನಾಡುತ್ತಿದ್ದಾರೆ' ಎಂದು ಅಡಿಬರಹ ನೀಡಿತ್ತು. ಇದೀಗ ಟೀಕೆಗೆ ಗುರಿಯಾಗಿದೆ.
ಪದಬಳಕೆಗೆ ವಿಷಾದಿಸಿದ ಸುದ್ದಿ ವಾಹಿನಿ:ಇದರ ಬೆನ್ನಲ್ಲೇ ಫಾಕ್ಸ್ ನ್ಯೂಸ್ ವಿಷಾದ ವ್ಯಕ್ತಪಡಿಸಿದೆ. ಅಧ್ಯಕ್ಷರ ವಿರುದ್ಧ ಬಳಸಲಾದ ಪದದ ಬಗ್ಗೆ ವಿಷಾದವಿದೆ. ಇದು ದುರುದ್ದೇಶಪೂರ್ವಕವಾಗಿ ಭಿತ್ತರಿಸಿದ್ದಲ್ಲ. ತಕ್ಷಣವೇ ಸರಿ ಮಾಡಲಾಗಿದೆ ಎಂದು ವಾಹಿನಿ ಸಮಜಾಯಿಷಿ ನೀಡಿದೆ. ಸರ್ವಾಧಿಕಾರಿ ಆಗಲು ಬಯಸುವ ಜೋ ಬೈಡನ್ ಎಂಬ ಸಾಲು ಟಿವಿ ಪರದೆಯ ಮೇಲೆ 27 ಸೆಕೆಂಡುಗಳ ಕಾಲ ಇತ್ತು ಎಂದು ವರದಿಯಾಗಿದೆ. ಇದು ಕಾರ್ಯಕ್ರಮದ ಮರುಪ್ರಸಾರದ ವೇಳೆಯೂ ಭಿತ್ತರವಾಗಿದೆ ಎಂದು ಹೇಳಲಾಗಿದೆ.