ಬ್ಯಾಂಕಾಕ್ (ಥಾಯ್ಲೆಂಡ್) : ಬ್ಯಾಂಕಾಕ್ನ ದಕ್ಷಿಣಕ್ಕೆ ಸರಿಸುಮಾರು 600 ಕಿ.ಮೀ (370 ಮೈಲು) ದೂರದಲ್ಲಿರುವ ಸೂರತ್ ಥಾನಿ ಪ್ರಾಂತ್ಯದ ಖಿರಿ ರಾತ್ ನಿಖೋಮ್ ಜಿಲ್ಲೆಯಲ್ಲಿ ಶನಿವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 12 ತಿಂಗಳುಗಳಲ್ಲಿ ಇಲ್ಲಿ ಭಾರಿ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಈಶಾನ್ಯ ನಾಂಗ್ ಬುವಾ ಲ್ಯಾಮ್ ಫು ಪ್ರಾಂತ್ಯದಲ್ಲಿ ಮಾಜಿ ಪೊಲೀಸ್ ಸಾರ್ಜೆಂಟ್ವೊಬ್ಬ 24 ಮಕ್ಕಳು ಸೇರಿದಂತೆ 36 ಜನರನ್ನು ಕೊಂದ ನಂತರ ಆತಂಕ ಮನೆ ಮಾಡಿತ್ತು. ಮತ್ತು ಫೆಟ್ಚಬುರಿ ಪ್ರಾಂತ್ಯದದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ, ಥೈಲ್ಯಾಂಡ್ನಲ್ಲಿ ಹೆಚ್ಚಿನ ಪ್ರಮಾಣದ ಗನ್ ಮಾಲೀಕತ್ವವನ್ನು ಹೊಂದಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಎರಡು ಗುಂಪುಗಳ ಮಧ್ಯೆ ಗುಂಡಿನ ದಾಳಿ, ಎಂಟು ಜನ ಬಲಿ.. ಮನೆ ತೊರೆದ ಹಲವಾರು ಕುಟುಂಬಗಳು
ಇನ್ನೊಂದೆಡೆ, ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಕಳೆದ ಮಾರ್ಚ್ ತಿಂಗಳ ಒಂದೇ ವಾರದಲ್ಲಿ ವಿಪರೀತ ವಾಯುಮಾಲಿನ್ಯದಿಂದಾಗಿ 2 ಲಕ್ಷ ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. 10 ಮಿಲಿಯನ್ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಬ್ಯಾಂಕಾಕ್ನಲ್ಲಿ ಕೈಗಾರಿಕಾ ಹೊರಸೂಸುವಿಕೆ, ವಾಹನಗಳ ಹೊಗೆ, ಕೃಷಿ ಕ್ಷೇತ್ರಗಳಲ್ಲಿನ ಬೆಳೆ ಸುಡುವಿಕೆಯಿಂದ ಉಂಟಾಗುವ ಇಂಗಾಲದ ಡೈ ಆಕ್ಸೈಡ್ನಿಂದ ಇಲ್ಲಿನ ಜನ ಬಳಲುತ್ತಿದ್ದಾರೆ.