ಕಠ್ಮಂಡು :ಕಾರೊಂದು ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಭಾರತೀಯ ಪ್ರವಾಸಿಗರು ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಧಾಡಿಂಗ್ ಜಿಲ್ಲೆಯಲ್ಲಿ ನಡೆದಿದೆ. ಠಾಕ್ರೆ ಪ್ರದೇಶದ ಪೃಥ್ವಿ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ಕುಟುಂಬದ ನಾಲ್ವರು ಭಾರತೀಯ ಪ್ರಜೆಗಳು ಕಠ್ಮಂಡುವಿನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಪೊಖರಾ ಎಂಬ ರಮಣೀಯ ನಗರಕ್ಕೆ ಭೇಟಿ ನೀಡಿದ್ದರು. ಪೊಖರಾ ಪ್ರವಾಸದ ಬಳಿಕ ಅವರೆಲ್ಲರೂ ಮತ್ತೆ ಕಠ್ಮಂಡುವಿಗೆ ಹಿಂತಿರುಗುತ್ತಿದ್ದರು.
ಬಸ್ ಕಠ್ಮಂಡುವಿನಿಂದ ಧಾಡಿಂಗ್ ಕಡೆಗೆ ಹೋಗುತ್ತಿತ್ತು. ಕಿರಿದಾದ ರಸ್ತೆ ಇರುವುದರಿಂದ ಬಸ್ ಮತ್ತು ಕಾರ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಓದಿ:ಶಾಲಾ ಬಸ್ ಅಪಘಾತದಲ್ಲಿ ಮಗನ ಕಳೆದುಕೊಂಡ ತಾಯಿಯ ರೋಧನೆ; ಸಾಂತ್ವನದ ಬದಲು ಗದರಿದ ಅಧಿಕಾರಿ!
ಡಿಕ್ಕಿ ಸಂಭವಿಸಿದ ಬಳಿಕ ಸ್ಥಳೀಯರು ನಮಗೆ ಮಾಹಿತಿ ರವಾನಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಸುದ್ದಿ ತಿಳಿದಾಕ್ಷಣ ನಾವು ಅಪಘಾತ ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ಜೊತೆ ರಕ್ಷಣಾ ಕಾರ್ಯ ಮುಂದುವರಿಸಿ ಗಂಭೀರವಾಗಿ ಗಾಯಗೊಂಡಿದ್ದ ಪ್ರವಾಸಿಗರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರೆಲ್ಲರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರಪ್ರದೇಶದ ಬಿಮಲಚಂದ್ರ ಅಗರವಾಲ್ (40), ಸಾಧನಾ ಅಗರವಾಲ್ (35), ಸಂಧ್ಯಾ ಅಗರವಾಲ್ (40), ರಾಕೇಶ್ ಅಗರವಾಲ್ (55) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ತನ್ಹು ಜಿಲ್ಲೆಯ ಖೈರೇನಿಯ ನೇಪಾಳದ ಚಾಲಕ ದಿಲ್ ಬಹದ್ದೂರ್ ಬಾಸ್ನೆಟ್ (36) ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೇಪಾಳ ದೇಶವು ಹೆಚ್ಚಾಗಿ ಪರ್ವತಗಳಿಂದ ಆವೃತವಾಗಿದೆ ಮತ್ತು ಹೆಚ್ಚಿನ ರಸ್ತೆಗಳು ಕಿರಿದಾಗಿದೆ. ಹೀಗಾಗಿ ಇಲ್ಲಿ ರಸ್ತೆ ಅಪಘಾತಗಳು ತುಂಬಾ ಸಾಮಾನ್ಯವಾಗಿದೆ. ಇಲ್ಲಿನ ಅಪಘಾತಗಳಿಗೆ ಸಾಮಾನ್ಯವಾಗಿ ಕಳಪೆ ರಸ್ತೆಗಳ ಕಾರಣವೆಂದು ಹೇಳಲಾಗುತ್ತಿದೆ.