ಅಟ್ಲಾಂಟಾ (ಅಮೆರಿಕ) : 2020ರ ಜಾರ್ಜಿಯಾ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡಲು ಯತ್ನಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿಗೆ ಬಂದು ಶರಣಾಗಿದ್ದಾರೆ. ಟ್ರಂಪ್ ಶರಣಾಗತಿ ಹಿನ್ನೆಲೆಯಲ್ಲಿ ಜೈಲಿನ ಹೊರಗೆ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ಮಾಧ್ಯಮಗಳ ವರದಿ ಪ್ರಕಾರ, ಶರಣಾದ ಅಮೆರಿಕದ ಮಾಜಿ ಅಧ್ಯಕ್ಷರನ್ನು ಜೈಲು ಅಧಿಕಾರಿಗಳು ಬಂಧಿಸಿದ್ದಾರೆ. ಟ್ರಂಪ್ ಶರಣಾಗುವ ಮುನ್ನ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೈಲಿನ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಜೊತೆಗೆ, ಜಿಲ್ಲಾಧಿಕಾರಿ ಫ್ಯಾನಿ ವಿಲ್ಲಿಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಲಾಯಿತು. ಇನ್ನು ಟ್ರಂಪ್ ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿದೆ ಎಂದು ಶೆರಿಫ್ ಕಚೇರಿ ಸಹ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಅವರು 6 ಅಡಿ 3 ಇಂಚು (1.9 ಮೀಟರ್) ಉದ್ದವಿದ್ದು, 97 ಕೆಜಿ ತೂಕ ಹೊಂದಿದ್ದಾರೆ. ಮತ್ತು ಸ್ಟ್ರಾಬೆರಿ ಬಣ್ಣದ ಕೂದಲು ಹೊಂದಿದ್ದಾರೆ ಎಂದು ಜೈಲ್ಲಿ ಪುಸ್ತಕದಲ್ಲಿ ಪಟ್ಟಿ ಮಾಡಲಾಗಿದೆ. ಶರಣಾದ ಸುಮಾರು 20 ನಿಮಿಷಗಳ ಬಳಿಕ ಟ್ರಂಪ್ ಅಟ್ಲಾಂಟಾ ಜೈಲಿನಿಂದ ನಿರ್ಗಮಿಸಿದರು. ಅವರು $200,000 ಬಾಂಡ್ ನೀಡಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಬಳಿಕ, ನ್ಯೂಜೆರ್ಸಿಗೆ ಹಿಂದಿರುಗುವ ವಿಮಾನಕ್ಕಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ :ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ : ಡೊನಾಲ್ಡ್ ಟ್ರಂಪ್