ನ್ಯೂಯಾರ್ಕ್:ತಮ್ಮ ನಡುವಿನ ಅನೈತಿಕ ಸಂಬಂಧವನ್ನು ಬಹಿರಂಗಪಡಿಸಬಾರದು ಎಂದು ವಯಸ್ಕ ಚಿತ್ರಗಳ ತಾರೆಗೆ ಹಣ ನೀಡಿದ ಕ್ರಿಮಿನಲ್ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಮ್ಯಾನ್ಹಟನ್ ನ್ಯಾಯಾಲಯಕ್ಕೆ ಕರೆ ತಂದರು. ವಿಚಾರಣೆಯ ವೇಳೆ ಟ್ರಂಪ್ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ತಾವು ನಿರಪರಾಧಿ ಎಂದು ವಾದ ಮಂಡಿದ್ದಾರೆ.
ಅಮೆರಿಕದ ಇತಿಹಾಸದಲ್ಲಿಯೇ ಕ್ರಿಮಿನಲ್ ಆರೋಪ ಎದುರಿಸಿ, ಬಂಧನಕ್ಕೆ ಒಳಗಾದ ಮೊದಲ ಅಧ್ಯಕ್ಷ ಟ್ರಂಪ್ ಆಗಿದ್ದಾರೆ. ಟ್ರಂಪ್ 2016 ರಲ್ಲಿ ಅಮೆರಿಕದ ಅಧ್ಯಕ್ಷರಾಗುವ ಮೊದಲು ವಯಸ್ಕ ಚಿತ್ರಗಳ ತಾರೆ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಅದನ್ನು ಮರೆಮಾಚಲು ಹಣ ನೀಡಲಾಗಿತ್ತು ಎಂಬ ಆರೋಪ ಹೊಂದಿದ್ದರು. ಅದರಂತೆ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಲಾಗುತ್ತಿದೆ. ಅಧ್ಯಕ್ಷೀಯ ಚುನಾವಣೆ ಹೊತ್ತಲ್ಲೇ ಅವರ ಬಂಧನವಾಗಿರುವುದು ರಾಜಕೀಯ ಬಿಸಿ ಏರಿಸಿದೆ.
ನ್ಯಾಯಾಲಯಕ್ಕೆ ಶರಣಾದ ಟ್ರಂಪ್, ನ್ಯಾಯಮೂರ್ತಿ ಜುವಾನ್ ಮರ್ಚನ್ ಅವರ ಮುಂದೆ ವಿಚಾರಣೆಗೆ ಒಳಪಟ್ಟರು. ಅವರ ವಿರುದ್ಧ ಕೇಳಿಬಂದ ವೈಯಕ್ತಿಕ 34 ಕ್ರಿಮಿನಲ್ ಆರೋಪಗಳನ್ನು ನಿರಾಕರಿಸಿದ್ದಾರೆ. ಕಾನೂನು ಸಲಹಾ ಸಿಬ್ಬಂದಿ ಜೊತೆಗೆ ಕೋರ್ಟ್ಗೆ ಬಂದ ಟ್ರಂಪ್ ತನ್ನದು ತಪ್ಪಿಲ್ಲ ಎಂದು ವಾದಿಸಿದರು.
ರಾಜಕೀಯ ದ್ವೇಷ:ವಿಚಾರಣೆಯ ಬಳಿಕ ಹೊರಬಂದ ಟ್ರಂಪ್ ಅವರ ಪರ ವಕೀಲ ಟಾಡ್ ಬ್ಲಾಂಚೆ ಅವರು, ತಮ್ಮ ಕಕ್ಷಿದಾರರು ಅಸಮಾಧಾನಗೊಂಡಿದ್ದಾರೆ. ಪ್ರಾಸಿಕ್ಯೂಟರ್ "ರಾಜಕೀಯ ಸಮಸ್ಯೆಯನ್ನು" "ರಾಜಕೀಯ ಪ್ರಾಸಿಕ್ಯೂಷನ್" ಆಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು. ಟ್ರಂಪ್ ವಿರುದ್ಧ ಬಂದ ಎಲ್ಲ ಆರೋಪಗಳ ವಿರುದ್ಧ ಹೋರಾಡಲಿದ್ದೇವೆ ಎಂದು ಹೇಳಿದರು.