ಕರ್ನಾಟಕ

karnataka

ಜಾರ್ಜ್ ಫ್ಲಾಯ್ಡ್ ಕೊಲೆ: ಮಾಜಿ ಪೊಲೀಸ್ ಅಧಿಕಾರಿಗೆ 20ಕ್ಕೂ ಹೆಚ್ಚು ವರ್ಷ ಜೈಲು ಶಿಕ್ಷೆ

By

Published : Jul 8, 2022, 7:54 AM IST

ಕಳೆದ ವರ್ಷ ಮೇ 25ರಂದು ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯನ್ನು ಬಂಧಿಸಿ, ಸಾರ್ವಜನಿಕವಾಗಿ ಹತ್ಯೆ ಮಾಡಲಾಗಿತ್ತು.

ಡೆರೆಕ್ ಚೌವಿನ್‌
ಡೆರೆಕ್ ಚೌವಿನ್‌

ವಾಷಿಂಗ್ಟನ್: ಆಫ್ರಿಕನ್-ಅಮೆರಿಕನ್‌ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದ ಅಪರಾಧಿ ಎಂದು ಘೋಷಿಸಲ್ಪಟ್ಟ ಅಮೆರಿಕದ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ ಅವರಿಗೆ ಗುರುವಾರ 20 ವರ್ಷಗಳಿಗೂ ಹೆಚ್ಚು ಕಾಲ ಅಥವಾ 252 ತಿಂಗಳ ಜೈಲು ಶಿಕ್ಷೆ ವಿಧಿಸಿ ಅಮೆರಿಕ ನ್ಯಾಯಾಂಗ ಇಲಾಖೆ ಆದೇಶ ಹೊರಡಿಸಿದೆ. ಮೇ 25, 2020 ರಂದು ಮಿನೆಸೋಟಾದ ಅಂಗಡಿಯೊಂದರಲ್ಲಿ ನಕಲಿ ಬಿಲ್ ಬಳಸಿದ ಆರೋಪದ ಮೇಲೆ ನಾಲ್ಕು ಪೊಲೀಸ್ ಅಧಿಕಾರಿಗಳು ಫ್ಲಾಯ್ಡ್ ಅವರನ್ನು ವಶಕ್ಕೆ ಪಡೆದಿದ್ದರು. ನಿರಾಯುಧನಾಗಿದ್ದ ಫ್ಲಾಯ್ಡ್ ಕುತ್ತಿಗೆಗೆ ತನ್ನ ಮಂಡಿಯಲ್ಲಿ ಡೆರೆಕ್ ಚೌವಿನ್‌ ಅದುಮಿಟ್ಟಿದ್ದರು.

ಈ ಸಂದರ್ಭದಲ್ಲಿ ಬೇರೆ ಯಾವ ಅಧಿಕಾರಿಗಳೂ ಡೆರೆಕ್ ಚೌವಿನ್‌ರನ್ನು ತಡೆದಿಲ್ಲ. ''ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳುತ್ತಿದ್ದ ಜಾರ್ಜ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಮತ್ತು ಬೆನ್ನಿಗೆ ಬಲ ಬಿದ್ದ ಕಾರಣ ಉಸಿರುಗಟ್ಟಿ ಫ್ಲಾಯ್ಡ್ ಸಾವನ್ನಪ್ಪಿರುವುದಾಗಿ ತಿಳಿದು ಬಂದಿತ್ತು.

ಈ ದುಷ್ಕೃತ್ಯದ ಸುಮಾರು ಒಂಬತ್ತು ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಭಾರಿ ಪ್ರತಿಭಟನೆಯೂ ಭುಗಿಲೆದ್ದಿತ್ತು. ಅಮೆರಿಕದಾದ್ಯಂತ ದೊಡ್ಡ ಆಂದೋಲನವೇ ನಡೆದಿತ್ತು. ಕಪ್ಪು ವರ್ಣೀಯರ ವಿರುದ್ಧದ ಪಕ್ಷಪಾತದ ಧೋರಣೆ ಖಂಡಿಸಿ ಜಗತ್ತಿನಾದ್ಯಂತ ಪ್ರತಿಭಟನೆಯ ಕಾವು ಹಬ್ಬಿತ್ತು. ಜೊತೆಗೆ, ಕಪ್ಪು ವರ್ಣೀಯರ ಮೇಲಿನ ದೌರ್ಜನ್ಯ ಕೊನೆಗೊಳಿಸಬೇಕೆಂಬ ಆಗ್ರಹ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು. ಇದೀಗ ಅಪರಾಧಿಗೆ ಶಿಕ್ಷೆ ಆಗಿದೆ.

ಇದನ್ನೂ ಓದಿ:ಜಾರ್ಜ್ ಫ್ಲಾಯ್ಡ್ ಹತ್ಯೆ: ವರ್ಣಭೇದ ನೀತಿ ವಿರುದ್ಧ ಸಿಡಿದೆದ್ದ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ

ABOUT THE AUTHOR

...view details