ಲಾಹೋರ್ (ಪಾಕಿಸ್ತಾನ) : ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮುಖ್ಯಸ್ಥ ನವಾಜ್ ಷರೀಫ್ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಈ ವರ್ಷದ ಅಂತ್ಯದ ವೇಳೆಗೆ ಪಾಕಿಸ್ತಾನಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
2018ರ ಸಾರ್ವತ್ರಿಕ ಚುನಾವಣೆಗೆ ಮೊದಲು ಭ್ರಷ್ಟಾಚಾರ ಪ್ರಕರಣಗಳಲ್ಲಿ ಉತ್ತರದಾಯಿತ್ವ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನವಾಜ್, 2019ರಲ್ಲಿ ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ಲಂಡನ್‌ಗೆ ತೆರಳಿದವರು ವಾಪಸ್ ಬಂದಿಲ್ಲ. ಅಂದಿನಿಂದಲೂ ಲಂಡನ್ನಲ್ಲಿಯೇ ವಾಸ ಮಾಡುತ್ತಿದ್ದಾರೆ. ಕಳೆದ ವಾರ ದುಬೈಗೆ ಬಂದಿದ್ದ ನವಾಜ್ ಅಲ್ಲಿ ಹಲವಾರು ಪಾಕಿಸ್ತಾನದ ರಾಜಕಾರಣಿಗಳನ್ನು ಭೇಟಿಯಾಗಿದ್ದರು. ಗಲ್ಫ್ ಎಮಿರೇಟ್‌ಗೆ ನವಾಜ್ ಬಂದಿದ್ದರಿಂದ, ಅವರು ಪಾಕಿಸ್ತಾನಕ್ಕೆ ಶೀಘ್ರ ಮರಳಬಹುದು ಎಂದು ಪಾಕಿಸ್ತಾನದ ಮಾಧ್ಯಮಗಳು ಬಿಂಬಿಸಲಾರಂಭಿಸಿವೆ. ಆದಾಗ್ಯೂ ನವಾಜ್ ಈಗಲೇ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಈ ಬಗ್ಗೆ ಮಾಹಿತಿ ಇರುವ ಸಂಪುಟ ಸಚಿವರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಪನಾಮ ಪೇಪರ್ಸ್ ಪ್ರಕರಣದ ನಂತರ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಸಲ್ಲಿಸಿದ ಅಲ್-ಅಜಿಝಿಯಾ ಮತ್ತು ಅವೆನ್‌ಫೀಲ್ಡ್ ಅಪಾರ್ಟ್‌ಮೆಂಟ್ ಪ್ರಕರಣಗಳಲ್ಲಿ ನವಾಜ್ ಶಿಕ್ಷೆಗೊಳಗಾಗಿದ್ದಾರೆ. ಅವರ ಮೇಲ್ಮನವಿಗಳು ಸಂಬಂಧಿತ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ. ನವಾಜ್ ಅವರ ಮರಳುವಿಕೆಯ ಬಗ್ಗೆ ಅವರ ಕುಟುಂಬಕ್ಕೆ ತಿಳಿದಿದೆ ಎಂದು ಮೂಲಗಳು ಹೇಳಿವೆ. "ನನ್ನ ತಿಳುವಳಿಕೆ ಮತ್ತು ಪಕ್ಷದ ಒಳಗಿನಿಂದ ನನಗೆ ಬಂದ ಮಾಹಿತಿಯ ಪ್ರಕಾರ ನವೆಂಬರ್ ವೇಳೆಗೆ ನವಾಜ್ ಹಿಂತಿರುಗುವ ಸಾಧ್ಯತೆಯಿದೆ. ಅಷ್ಟರೊಳಗೆ ಅವರ ಮೇಲಿನ ಕಾನೂನು ತೊಡಕುಗಳೆಲ್ಲವನ್ನೂ ನಿವಾರಿಸಲಾಗುತ್ತದೆ" ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.