ಕರಾಚಿ: ಪಾಕ್ ಮಾಜಿ ಪ್ರಧಾನಿ ಭುಟ್ಟೋ ಅವರ ಮೊಮ್ಮಗಳು ಮತ್ತು ಬೆನಜೀರ್ ಭುಟ್ಟೋ ಅವರ ಸೋದರ ಸೊಸೆ ಫಾತಿಮಾ ಭುಟ್ಟೊ ಅವರು ಕರಾಚಿಯಲ್ಲಿ ಮದುವೆಯಾದರು. ವಧುವಿನ ಸಹೋದರ ಜುಲ್ಫಿಕರ್ ಅಲಿ ಭುಟ್ಟೊ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಜುಲ್ಫಿಕರ್ ಅಲಿ ಭುಟ್ಟೊ ಮಾಹಿತಿಯ ಪ್ರಕಾರ ಮುರ್ತಾಜಾ ಭುಟ್ಟೋ ಅವರ ಪುತ್ರಿ ಫಾತಿಮಾ ಭುಟ್ಟೋ ಅವರ ನಿಕ್ಕಾ ಸಮಾರಂಭವು ಕರಾಚಿಯ 70 ಕ್ಲಿಫ್ಟನ್‌ನಲ್ಲಿರುವ ಕುಟುಂಬದ ನಿವಾಸದಲ್ಲಿ ನಡೆಯಿತು.
"ನಮ್ಮ ತಂದೆ, ಶಹೀದ್ ಮಿರ್ ಮುರ್ತಾಜಾ ಭುಟ್ಟೋ ಮತ್ತು ಭುಟ್ಟೋ ಕುಟುಂಬದ ಪರವಾಗಿ, ಕೆಲವು ಸಂತೋಷದ ಸುದ್ದಿಗಳನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನನ್ನ ಸಹೋದರಿ ಫಾತಿಮಾ ಮತ್ತು ಗ್ರಹಾಂ ನಿನ್ನೆ ನಮ್ಮ ಮನೆಯಲ್ಲಿ ನಡೆದ ನಿಕ್ಕಾ ಸಮಾರಂಭದಲ್ಲಿ ವಿವಾಹವಾದರು ಎಂದು ಜುಲ್ಫಿಕರ್ ಅಲಿ ಭುಟ್ಟೊ ಟ್ವೀಟ್ ಮಾಡಿದ್ದಾರೆ.
"ನಮ್ಮ ಅಜ್ಜನ ಲೈಬ್ರರಿಯಲ್ಲಿ ನಡೆದ ಸಮಾರಂಭದಲ್ಲಿ ಫಾತಿಮಾ ಅವರ ಪ್ರೀತಿಪಾತ್ರರು ಭಾಗವಹಿಸಿದ್ದರು. ಇದು ನನ್ನ ಪ್ರೀತಿಯ ಸಹೋದರಿಗೆ ತುಂಬಾ ಗೌರವವನ್ನು ನೀಡುತ್ತದೆ. ನಮ್ಮ ದೇಶವಾಸಿಗಳು ಮತ್ತು ಮಹಿಳೆಯರು ಅನುಭವಿಸಿದ ಕಷ್ಟದ ಪರಿಸ್ಥಿತಿಗಳಲ್ಲಿ ಅದ್ಧೂರಿಯಾಗಿ ಮದುವೆ ಮಾಡುವುದು ಸೂಕ್ತವಲ್ಲ ಎಂದು ನಾವೆಲ್ಲರೂ ಭಾವಿಸಿದ್ದೇವೆ ಅಂತಾ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ನಿಕ್ಕಾ ಸಮಾರಂಭದ ಸಮಯದಲ್ಲಿ ಫಾತಿಮಾ ಭುಟ್ಟೋ ತನ್ನ ಮದುವೆಯ ಉಡುಪಿನೊಂದಿಗೆ ಸರಳತೆಯಿಂದ ಕಂಗೊಳಿಸುತ್ತಿದ್ದರು. ಬಳೆಗಳು ಮತ್ತು ಬೆಳ್ಳಿಯ ಮಾಂಗ್ ಟಿಕ್ಕಾದೊಂದಿಗೆ ಜೋಡಿಸಲಾದ ಬಿಳಿ ಅನಾರ್ಕಲಿ ಸೂಟ್ ಅನ್ನು ಅವರು ಧರಿಸಿದ್ದರು. ಪಿಂಕ್ ನ್ಯೂಡ್ ಲಿಪ್ ಶೇಡ್‌ಗಳನ್ನು ಧರಿಸುವ ಮೂಲಕ ಸುಂದರವಾಗಿ ಕಾಣುತ್ತಿದ್ದರು. ಇನ್ನು ಆಕೆಯ ಪತಿ ಬಿಳಿ ಪಠಾನಿ ಸೂಟ್‌ನಲ್ಲಿ ಮಿಂಚುತ್ತಿದ್ದರು.