ಕರ್ನಾಟಕ

karnataka

ETV Bharat / international

ಬಹುಕಾಲದ ಗೆಳೆಯ ಗೇಫೋರ್ಡ್​ರನ್ನು ವರಿಸಿದ ನ್ಯೂಜಿಲೆಂಡ್ ಮಾಜಿ ಪ್ರಧಾನಿ ಜಸಿಂಡಾ - ಕ್ಲಾರ್ಕ್ ಗೇಫೋರ್ಡ್

ನ್ಯೂಜಿಲೆಂಡ್​ನ ಮಾಜಿ ಪ್ರಧಾನಿ ಜಸಿಂಡಾ ಆರ್ಡೆರ್ನ್ ತಮ್ಮ ಬಹುಕಾಲದ ಗೆಳೆಯನೊಂದಿಗೆ ವಿವಾಹವಾಗಿದ್ದಾರೆ.

former-New-Zealand-Prime-Minister-Jacinda-Ardern-ties-the-knot
former-New-Zealand-Prime-Minister-Jacinda-Ardern-ties-the-knot

By ETV Bharat Karnataka Team

Published : Jan 14, 2024, 3:59 PM IST

ವೆಲ್ಲಿಂಗ್ಟನ್: ನ್ಯೂಜಿಲೆಂಡ್​ನ ಮಾಜಿ ಪ್ರಧಾನಿ ಜಸಿಂಡಾ ಆರ್ಡೆರ್ನ್ ಶನಿವಾರ ಖಾಸಗಿ ಸಮಾರಂಭದಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಕ್ಲಾರ್ಕ್ ಗೇಫೋರ್ಡ್ ಅವರನ್ನು ವಿವಾಹವಾದರು. ಸುಮಾರು ಐದು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಕೊರೊನಾವೈರಸ್​ ಸಾಂಕ್ರಾಮಿಕದ ಕಾರಣದಿಂದ ಇವರ ವಿವಾಹ ಮುಂದೂಡಲ್ಪಟ್ಟಿತ್ತು.

ವಿವಾಹ ಸಮಾರಂಭದ ಮಾಹಿತಿಗಳನ್ನು ಜೋಡಿಯು ಗೌಪ್ಯವಾಗಿಟ್ಟಿದೆ. ನ್ಯೂಜಿಲೆಂಡ್​ನ ರಾಜಧಾನಿ ವೆಲ್ಲಿಂಗ್ಟನ್​ನಿಂದ 325 ಕಿಲೋಮೀಟರ್ (200 ಮೈಲಿ) ದೂರದಲ್ಲಿರುವ ಸುಂದರವಾದ ಹಾಕ್ಸ್ ಕೊಲ್ಲಿ ಪ್ರದೇಶದ ಐಷಾರಾಮಿ ದ್ರಾಕ್ಷಿತೋಟದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ ಎಂದು ವರದಿಯಾಗಿದೆ. ಮತ್ತೋರ್ವ ಮಾಜಿ ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಸೇರಿದಂತೆ ಮಾಜಿ ಸಂಸದ ಸಹೋದ್ಯೋಗಿಗಳು ಹಾಗೂ ತೀರಾ ಹತ್ತಿರದ ಬಂಧು ಬಾಂಧವರನ್ನು ಮಾತ್ರ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು ಎಂದು ತಿಳಿದು ಬಂದಿದೆ.

43 ವರ್ಷದ ಆರ್ಡೆರ್ನ್ ಮತ್ತು 47 ವರ್ಷದ ಗೇಫೋರ್ಡ್ 2014 ರಲ್ಲಿ ಡೇಟಿಂಗ್ ಪ್ರಾರಂಭಿಸಿದ್ದರು ಮತ್ತು ಐದು ವರ್ಷಗಳ ನಂತರ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅರ್ಡೆರ್ನ್ ಸರ್ಕಾರದ ಕೋವಿಡ್ -19 ನಿರ್ಬಂಧಗಳಿಂದಾಗಿ ಯಾವುದೇ ಸಮಾರಂಭದಲ್ಲಿ 100ಕ್ಕಿಂತ ಹೆಚ್ಚು ಜನರಿಗೆ ಅವಕಾಶ ನಿರ್ಬಂಧಿಸಿದ್ದರಿಂದ 2022 ರ ಬೇಸಿಗೆಯಲ್ಲಿ ಯೋಜಿಸಲಾಗಿದ್ದ ಮದುವೆಯನ್ನು ಮುಂದೂಡಲಾಗಿತ್ತು.

ತಮ್ಮ ಮದುವೆ ಸಮಾರಂಭ ಮುಂದೂಡಿದ್ದ ಆರ್ಡೆರ್ನ್, ಜೀವನ ಇರುವುದೇ ಹೀಗೆ ಎಂದು ಹೇಳಿದ್ದರು. ಸಾವಿರಾರು ನ್ಯೂಜಿಲೆಂಡ್​ ಪ್ರಜೆಗಳಿಗಿಂತ ನಾನೇನೂ ಬೇರೆಯಲ್ಲ ಎಂದು ಆಗ ಅವರು ಹೇಳಿದ್ದರು. ತಮ್ಮ 37ನೇ ವಯಸ್ಸಿನಲ್ಲಿಯೇ ನ್ಯೂಜಿಲೆಂಡ್​ ಪ್ರಧಾನಿಯಾದ ಆರ್ಡೆರ್ನ್, ಪ್ರಮುಖ ಜಾಗತಿಕ ಎಡಪಂಥೀಯ ನಾಯಕಿಯಾಗಿ ಗುರುತಿಸಿಕೊಂಡರು.

2018 ರಲ್ಲಿ ಅರ್ಡೆರ್ನ್ ತಾವು ಅಧಿಕಾರದಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ್ದರು. ಆ ಮೂಲಕ ಹಾಗೆ ಮಾಡಿದ ಚುನಾಯಿತರಾದ ಎರಡನೇ ವಿಶ್ವ ನಾಯಕರಾದರು. ಅದೇ ವರ್ಷದ ಕೊನೆಯಲ್ಲಿ ಅವರು ತಮ್ಮ ನವಜಾತ ಮಗಳನ್ನು ನ್ಯೂಯಾರ್ಕ್​ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಜೊತೆಗೆ ಕರೆದುಕೊಂಡು ಬಂದಿದ್ದು ಸುದ್ದಿಯಾಗಿತ್ತು.

ಆರ್ಡೆರ್ನ್ ಅವರ ಸರ್ಕಾರದ ಅಡಿಯಲ್ಲಿ ನ್ಯೂಜಿಲೆಂಡ್ ವಿಶ್ವದ ಅತ್ಯಂತ ಕಠಿಣ ಕೊರೊನಾವೈರಸ್ ನಿರ್ಬಂಧಗಳನ್ನು ಜಾರಿ ಮಾಡಿತ್ತು. ಅಧಿಕಾರಕ್ಕೇರಿದ ಐದೂವರೆ ವರ್ಷಗಳ ನಂತರ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಹೇಳುವ ಮೂಲಕ ಆರ್ಡೆರ್ನ್ 2023 ರ ಜನವರಿಯಲ್ಲಿ ನ್ಯೂಜಿಲೆಂಡ್ ಜನರಿಗೆ ಆಶ್ಚರ್ಯ ಉಂಟು ಮಾಡಿದ್ದರು. ಸಾಮೂಹಿಕ ಗುಂಡಿನ ದಾಳಿಯ ಘಟನೆ ಮತ್ತು ಸಾಂಕ್ರಾಮಿಕ ಅಲೆಯ ಮಧ್ಯೆ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಸೇವೆಗಾಗಿ ಅರ್ಡೆರ್ನ್ ಅವರಿಗೆ ನ್ಯೂಜಿಲೆಂಡ್​ನ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ಮಾಲ್ಡೀವ್ಸ್‌: ಮಾಲೆ ಮೇಯರ್ ಚುನಾವಣೆಯಲ್ಲಿ ಭಾರತ ಪರವಾಗಿರುವ ಪಕ್ಷಕ್ಕೆ ಭರ್ಜರಿ ಗೆಲುವು

ABOUT THE AUTHOR

...view details