ಕೊಲಂಬೋ(ಶ್ರೀಲಂಕಾ):ಪ್ರತಿಯೊಬ್ಬರೂ ಅಹಿಂಸಾತ್ಮಕ ಪ್ರತಿಭಟನೆಯನ್ನು ಬಯಸುತ್ತಾರೆ. ಭೀಕರ ಆರ್ಥಿಕ ಬಿಕ್ಕಟ್ಟಿಗೆ ತಂದಿಟ್ಟ ರಾಜಪಕ್ಸ ರಾಜೀನಾಮೆಗೆ ನಾವು ಸಹ ಅದನ್ನೇ ಮಾಡಿದ್ದೇವೆ. ಆರಂಭದಿಂದಲೂ ನಾನು ಪ್ರತಿಭಟನಾಕಾರರ ಜೊತೆಯಲ್ಲಿಯೇ ಇದ್ದೇನೆ. ದೇಶವನ್ನು ಸುಸ್ಥಿತಿಯಲ್ಲಿ ತರುವತ್ತ ಮತ್ತು ಬಿಕ್ಕಟ್ಟನ್ನು ಸರಿದೂಗಿಸುವಲ್ಲಿ ಹಿರಿಯ ರಾಜಕಾರಣಿಗಳು ಮತ್ತು ಪಕ್ಷದ ನಾಯಕರು ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಜಿ ಕ್ರಿಕೆಟರ್ ಸನತ್ ಜಯಸೂರ್ಯ ಅಭಿಪ್ರಾಯ ಒತ್ತಾಯಿಸಿದ್ದಾರೆ.
ಭಾರತವು ಶ್ರೀಲಂಕಾಕ್ಕೆ ಮಾಡಿದ ಸಹಾಯವನ್ನು ಮರೆಯಲಾಗದು; ಮಾಜಿ ಕ್ರಿಕೆಟರ್ ಜಯಸೂರ್ಯ - ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು
ತನ್ನ ದೇಶದಲ್ಲಿ ನಡೆಯುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಶ್ರೀಲಂಕಾದ ಮಾಜಿ ಕ್ರಿಕೆಟರ್ ಸನತ್ ಜಯಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ.
![ಭಾರತವು ಶ್ರೀಲಂಕಾಕ್ಕೆ ಮಾಡಿದ ಸಹಾಯವನ್ನು ಮರೆಯಲಾಗದು; ಮಾಜಿ ಕ್ರಿಕೆಟರ್ ಜಯಸೂರ್ಯ Former Cricketer Sanath Jayasuriya Reaction Sri Lanka Crisis](https://etvbharatimages.akamaized.net/etvbharat/prod-images/768-512-15792673-414-15792673-1657525047173.jpg)
ತಮ್ಮ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಥಿರ ಸರ್ಕಾರದ ಉದಯದ ಬಳಿಕ ಐಎಂಎಫ್ (International Monetary Fund), ಭಾರತ ಮತ್ತು ಎಲ್ಲ ಸ್ನೇಹಪರ ದೇಶಗಳು ಶ್ರೀಲಂಕಾಕ್ಕೆ ಸಹಾಯ ಮಾಡಲಿವೆ ಎಂಬ ವಿಶ್ವಾಸ ನನಗಿದೆ. ಮುಖ್ಯವಾಗಿ ಭಾರತವು ಬಿಕ್ಕಟ್ಟಿನ ಆರಂಭದಿಂದಲೂ ಬಹಳ ಸಹಾಯವನ್ನು ಮಾಡುತ್ತಲೇ ಬಂದಿದೆ. ಶ್ರೀಲಂಕಾದ ಜನರೆಲ್ಲ ಅದಕ್ಕೆ ಕೃತಜ್ಞರು. ಭಾರತ ದೇಶವು ಶ್ರೀಲಂಕಾಕ್ಕೆ ಮಾಡಿದ ಸಹಾಯವು ಮರೆಯಲಾಗದ್ದು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಅಧ್ಯಕ್ಷ ಗೋಟಾಬಯ ವಿರುದ್ಧದ ಪ್ರತಿಭಟನೆಯಲ್ಲಿ ಸನತ್ ಜಯಸೂರ್ಯ ಪಾಲ್ಗೊಂಡು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ಏಕಾಏಕಿ ನುಗ್ಗಿದ್ದರು. ಪ್ರತಿಭಟನಾಕಾರರ ಆಕ್ರೋಶವನ್ನು ಕಂಡು ಗೊಟಬಯ ರಾಜಪಕ್ಸ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿದೆ. ಐಷಾರಾಮಿ ನಿವಾಸದ ಸುತ್ತಲೂ ಆವರಿಸಿದ ಪ್ರತಿಭಟನಾಕಾರರು, ಅಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.