ಕಾಬೂಲ್ (ಅಫ್ಘಾನಿಸ್ತಾನ) : ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್ ನಬಿಜಾದಾ (32) ಮತ್ತು ಅವರ ಭದ್ರತಾ ಸಿಬ್ಬಂದಿಯನ್ನು ಉಗ್ರರು ಶನಿವಾರ ಅವರ ನಿವಾಸದಲ್ಲಿಯೇ ಗುಂಡಿಕ್ಕಿ ಕೊಂದಿರುವುದಾಗಿ ಕಾಬೂಲ್ ಪೊಲೀಸರು ತಿಳಿಸಿದ್ದಾರೆ. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ಘಟನೆ ನಡೆದಿದೆ. ಮುರ್ಸಲ್ ಅವರ ಸಹೋದರ ಮತ್ತು ಎರಡನೇ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುರ್ಸಲ್ ನಬಿಜಾದಾ ಯಾರು?: 2021ರ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಧಿಕಾರ ವಶಪಡಿಸಿಕೊಂಡ ನಂತರ ಕಾಬೂಲ್‌ನಲ್ಲಿ ಉಳಿದುಕೊಂಡ ಕೆಲವು ಮಹಿಳಾ ಸಂಸದರಲ್ಲಿ ಮುರ್ಸಲ್ ನಬಿಜಾದಾ ಕೂಡ ಒಬ್ಬರು. ಅಫ್ಘಾನಿಸ್ತಾನ ತೊರೆಯುವ ಅವಕಾಶವನ್ನು ಇವರಿಗೆ ನೀಡಲಾಗಿದ್ದರೂ, ತನ್ನ ಜನರಿಗಾಗಿ ಹೋರಾಡಲು ನಿರ್ಧರಿಸಿ ಅಲ್ಲಿಯೇ ಉಳಿದುಕೊಂಡಿದ್ದರು. ನಬಿಜಾದಾ ಅವರು ನಂಗರ್ಹಾರ್ನ ಪೂರ್ವ ಪ್ರಾಂತ್ಯದ ನಿವಾಸಿಯಾಗಿದ್ದು, 2019 ರಲ್ಲಿ ಚುನಾಯಿತರಾಗಿದ್ದರು. ತಾಲಿಬಾನ್ ಕಾಬೂಲ್ ಅನ್ನು ವಶಕ್ಕೆ ಪಡೆದುಕೊಳ್ಳುವವರೆಗೂ ಇವರು ಅಧಿಕಾರದಲ್ಲಿದ್ದರು. ಸಂಸದೀಯ ರಕ್ಷಣಾ ಆಯೋಗದ ಸದಸ್ಯರೂ ಹೌದು. ಖಾಸಗಿ ಸರ್ಕಾರೇತರ ಗುಂಪಿನ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.
ಸೂಕ್ತ ತನಿಖೆಗೆ ವಿಶ್ವಸಂಸ್ಥೆ ಆಗ್ರಹ: ಅಫ್ಘಾನ್ ಮಾಜಿ ಶಾಸಕಿ ಮರಿಯಮ್ ಸೊಲೈಮಂಖಿಲ್, ಮಾಜಿ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಅಬ್ದುಲ್ ಅಬ್ದುಲ್ಲಾ, ಮಾಜಿ ಸಂಸದೆ ಮಲಾಲೈ ಇಶಾಕ್ಝೈ ಸೇರಿದಂತೆ ಅಫ್ಘಾನಿಸ್ತಾನದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಮಿರ್ಸಲ್ ನಬಿಜಾದಾ ಹತ್ಯೆ ಕುರಿತು ತನಿಖೆ ನಡೆಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೇರಸ್ ಆಗ್ರಹಿಸಿದ್ದಾರೆ.