ಕರ್ನಾಟಕ

karnataka

ETV Bharat / international

SCO: ಮುಂದಿನ ತಿಂಗಳು ಭಾರತಕ್ಕೆ ಬಿಲಾವಲ್ ಭುಟ್ಟೋ; ನವಾಜ್ ಷರೀಫ್ ಬಳಿಕ ಮಹತ್ವದ ಭೇಟಿ - ಭಾರತ ಮತ್ತು ಪಾಕ್​ ಸಂಬಂಧ

ಗೋವಾದಲ್ಲಿ ಮೇ 4 ಮತ್ತು 5ರಂದು ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಪರಿಷತ್ತು ಸಭೆಯಲ್ಲಿ ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ನಿಯೋಗ ಭಾಗಿಯಾಗಲಿದೆ ಎಂದು ಪಾಕಿಸ್ತಾನ ಪ್ರಕಟಿಸಿದೆ.

Foreign Minister Bilawal Bhutto to attend SCO meeting in India on May 4-5: Pakistan Foreign Office
ಮುಂದಿನ ತಿಂಗಳು ಭಾರತಕ್ಕೆ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭೇಟಿ: ಪಾಕಿಸ್ತಾನ ಘೋಷಣೆ

By

Published : Apr 20, 2023, 6:24 PM IST

ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತದಲ್ಲಿ ಮುಂದಿನ ತಿಂಗಳು ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ. ಇದು ಎರಡು ದೇಶಗಳ ನಡುವೆ ಬೆಳೆದಿರುವ 'ವೈರತ್ವದ ಮಂಜುಗಡ್ಡೆ'ಯನ್ನು ಕರಗಿಸುವ ಅವಕಾಶದ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.

ಗೋವಾದಲ್ಲಿ ಮೇ 4 ಮತ್ತು 5ರಂದು ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಸಚಿವರ ಪರಿಷತ್ತು (Council of Foreign Ministers - CFM) ಸಭೆ ನಡೆಯಲಿದೆ. ಪಾಕಿಸ್ತಾನದ ನಿಯೋಗವನ್ನು ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮುನ್ನಡೆಸಲಿದ್ದಾರೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಪ್ರಕಟಿಸಿದ್ದಾರೆ. ಈ ಮೂಲಕ ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳ ಕಾರಣ ಈ ಸಭೆಯಲ್ಲಿ ಪಾಕ್​ ಸಚಿವರು ಭಾಗವಹಿಸುತ್ತಾರೆಯೇ ಎಂಬ ಚರ್ಚೆಗೆ ಅಂತ್ಯ ಹಾಡಲಾಗಿದೆ.

ಎಸ್‌ಸಿಒ ಸಭೆಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಹ್ವಾನದ ಮೇರೆಗೆ ವಿದೇಶಾಂಗ ಸಚಿವ ಬಿಲಾವಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ನಮ್ಮ ಭಾಗವಹಿಸುವಿಕೆಯು ಶಾಂಘೈ ಸಹಕಾರ ಸಂಸ್ಥೆಯ ಹಕ್ಕು ಮತ್ತು ಅದರ ಪ್ರಕ್ರಿಯೆಗಳಿಗೆ ಪಾಕಿಸ್ತಾನದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪಾಕಿಸ್ತಾನವು ತನ್ನ ವಿದೇಶಾಂಗ ನೀತಿಯ ಆದ್ಯತೆಗಳ ಪ್ರಕಾರ ಸಭೆಯ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ವಕ್ತಾರ ಬಲೋಚ್ ತಿಳಿಸಿದರು.

ಇದು ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ನಾಯಕರೊಬ್ಬರು ಭಾರತಕ್ಕೆ ನೀಡಿರುವ ಉನ್ನತ ಭೇಟಿಯಾಗಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ 2019ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರವನ್ನು ಭಾರತದ ಯುದ್ಧ ವಿಮಾನಗಳು ಹೊಡೆದುರುಳಿಸಿದ್ದವು. ನಂತರ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿತ್ತು.

ಅಲ್ಲದೇ, 2019ರ ಆಗಸ್ಟ್​ನಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರದ 370 ವಿಶೇಷ ಕಲಂ ರದ್ದು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿ ರಚನೆ ನಂತರ ಭಾರತ ಮತ್ತು ಪಾಕ್​ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಭಾರತವು ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧಗಳನ್ನು ಬಯಸುತ್ತದೆ ಎಂದು ಹೇಳುತ್ತಾ ಬಂದಿದೆ. ಆದರೆ, ಈ ಸಂದರ್ಭಕ್ಕಾಗಿ ಭಯೋತ್ಪಾದನೆ ಮುಕ್ತ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದೂ ತಾಕೀತು ಮಾಡುತ್ತಲೂ ಇದೆ.

ಈ ಹಿಂದಿನ ಭೇಟಿಗಳು..: ಪಾಕಿಸ್ತಾನದ ವಿದೇಶಾಂಗ ಸಚಿವ ಹಿನಾ ರಬ್ಬಾನಿ ಖರ್ 2011ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. 2014ರ ಮೇನಲ್ಲಿ ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದ್ದರು. 2015ರ ಡಿಸೆಂಬರ್​ನಲ್ಲಿ ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ದಿ. ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಇದಾದ ಕೆಲವು ದಿನಗಳ ನಂತರ ಪ್ರಧಾನಿ ಮೋದಿ ನೆರೆಯ ರಾಷ್ಟ್ರಕ್ಕೆ ಸಂಕ್ಷಿಪ್ತ ಭೇಟಿ ನೀಡಿದ್ದರು.

ಎಸ್‌ಸಿಒ ಬಗ್ಗೆ...:2001ರಲ್ಲಿ ಶಾಂಘೈನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಿರ್ಗಿಜ್ ರಿಪಬ್ಲಿಕ್, ಕಝಾಕಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ರಾಷ್ಟ್ರಗಳ ಅಧ್ಯಕ್ಷರು ಈ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯನ್ನು ಸ್ಥಾಪಿಸಿದರು. ನಂತರದ ವರ್ಷಗಳಲ್ಲಿ ಇದು ಅತಿದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತ ಮತ್ತು ಪಾಕಿಸ್ತಾನವು 2017ರಲ್ಲಿ ಎಸ್‌ಸಿಒಯ ಖಾಯಂ ಸದಸ್ಯ ರಾಷ್ಟ್ರಗಳಾಗಿವೆ.

ಇದನ್ನೂ ಓದಿ:ಭಾರತದ ಶಕ್ತಿ ಹೊಗಳಿದ ಅಮೆರಿಕ: ಇಂಡಿಯಾ ಜೊತೆ ಕೆಲಸ ಮಾಡಲು ಬದ್ಧ ಎಂದ ದೊಡ್ಡಣ್ಣ

ABOUT THE AUTHOR

...view details