ಟೆಹ್ರಾನ್:ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸ್ಥಳೀಯ ವೃತ್ತಿಪರ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಮಹಿಳೆಯರಿಗೆ ಇರಾನ್ ಸರ್ಕಾರ ಅವಕಾಶ ಕಲ್ಪಿಸಿದೆ. ಇದು 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ನಡೆದ ಮಹತ್ವದ ಬೆಳವಣಿಗೆ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಕಳೆದ ಗುರುವಾರ ಟೆಹ್ರಾನ್ ಮೂಲದ ಎಸ್ಟೆಗ್ಲಾಲ್ ಎಫ್‌ಸಿ ಮತ್ತು ವಿಜಿಟಿಂಗ್ ತಂಡ ಸನತ್ ಮೆಸ್ ಕೆರ್ಮನ್ ಎಫ್‌ಸಿ ನಡುವಿನ ಲೀಗ್ ಪಂದ್ಯ ವೀಕ್ಷಿಸಲು 500 ಮಹಿಳೆಯರಿಗೆ ಆಜಾದಿ ಕ್ರೀಡಾಂಗಣದೊಳಗೆ ಪ್ರವೇಶ ನೀಡಲಾಗಿತ್ತು.
100,000 ಆಸನಗಳ ಸಾಮರ್ಥ್ಯದ ಈ ಕ್ರೀಡಾಂಗಣದಲ್ಲಿ ತಮಗೆ ಮೀಸಲಿರಿಸಲಾದ ಸೀಟ್ನಲ್ಲಿ ಕುಳಿತು, ನೀಲಿ ಬಣ್ಣದ ಧ್ವಜಗಳನ್ನು ಹಿಡಿದ ಮಹಿಳೆಯರು ಆಟಗಾರರನ್ನು ಹುರಿದುಂಬಿಸುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇಸ್ಲಾಮಿಕ್ ಕ್ರಾಂತಿಯ ನಂತರ ಟೆಹ್ರಾನ್ ಆಡಳಿತವು ಮಹಿಳೆಯರು ಫುಟ್ಬಾಲ್ ಪಂದ್ಯಗಳಲ್ಲಿ ಹಾಜರಾಗುವುದನ್ನು ನಿಷೇಧಿಸಿತ್ತು. ಆದ್ರೆ ಅವರು ವಾಲಿಬಾಲ್‌ನಂತಹ ಇತರ ಕ್ರೀಡೆಗಳನ್ನು ವೀಕ್ಷಿಸಬಹುದಿತ್ತು. 2019ರಲ್ಲಿ ಮೊದಲ ಬಾರಿಗೆ, ಎಎಫ್‌ಸಿ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಟೆಹ್ರಾನ್ನ ಪರ್ಸೆಪೊಲಿಸ್ ತಂಡ ಜಪಾನ್‌ನ ಕಾಶಿಮಾ ಆಂಟ್ಲರ್ಸ್ ವಿರುದ್ಧ ಆಡುವುದನ್ನು ವೀಕ್ಷಿಸಲು ನೂರಾರು ಇರಾನಿನ ಮಹಿಳೆಯರಿಗೆ ಅವಕಾಶ ದೊರೆತಿತ್ತು.
2022 ರ ಜನವರಿಯಲ್ಲಿ ಎರಡನೇ ಬಾರಿಗೆ, ಆಜಾದಿ ಸ್ಟೇಡಿಯಂನಲ್ಲಿ 2,000ಕ್ಕೂ ಹೆಚ್ಚು ಮಹಿಳಾ ಪ್ರೇಕ್ಷಕರು ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಇರಾಕ್ ತಂಡವನ್ನು ಸೋಲಿಸಿದ್ದ ಪಂದ್ಯ ವೀಕ್ಷಿಸಿದ್ದರು. ಆದರೆ, ಅದೇ ವರ್ಷದ ಮಾರ್ಚ್‌ನಲ್ಲಿ ಮಶಾದ್‌ನಲ್ಲಿ ನಡೆದ ಇರಾನ್ ಮತ್ತು ಲೆಬನಾನ್ ನಡುವಿನ ವಿಶ್ವಕಪ್ ಅರ್ಹತಾ ಪಂದ್ಯವನ್ನು ನೋಡುವ ಅವಕಾಶವನ್ನು ಇರಾನ್ ಅಧಿಕಾರಿಗಳು ಕಸಿದುಕೊಂಡಿದ್ದರು.
ಇದನ್ನೂ ಓದಿ:ಭಾರತ-ಪಾಕ್ ರೋಚಕ ಪಂದ್ಯದ ವೇಳೆ ಮಹಮ್ಮದ್ ರಿಜ್ವಾನ್ ತಬ್ಬಿ ಕ್ರೀಡಾಸ್ಫೂರ್ತಿ ಮೆರೆದ ಹಾರ್ದಿಕ್