ಪ್ಯಾರಿಸ್(ಫ್ರಾನ್ಸ್):ಪ್ಯಾರಿಸ್‌ನಲ್ಲಿ 'ಬಾಸ್ಟಿಲ್ ಡೇ ಪರೇಡ್' (ಫ್ರೆಂಚ್ ನ್ಯಾಷನಲ್ ಡೇ) ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್, ಫ್ರಾನ್ಸ್‌ನ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರೋನ್ ಈ ಸಂಭ್ರಮಾಚರಣೆಗೆ ಸಾಕ್ಷಿಯಾದರು. ಬಾಸ್ಟಿಲ್ ಡೇ ಪರೇಡ್‌ಗೆ ಮುನ್ನ ಪ್ರಧಾನಿ ಮೋದಿ, ಅಧ್ಯಕ್ಷ ಮ್ಯಾಕ್ರನ್ ಚಾಂಪ್ಸ್-ಎಲಿಸೀಸ್‌ಗೆ ಆಗಮಿಸಿದ್ದರು.
ಇಂದು ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯ ಪ್ರಮುಖ ಭಾಗವಾಗಿರುವ ಬಾಸ್ಟಿಲ್ ಡೇ ಪರೇಡ್‌ಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಪ್ಯಾರಿಸ್‌ನಲ್ಲಿ ಭೇಟಿಯಾದರು. ಅಧ್ಯಕ್ಷ ಮ್ಯಾನುಯೆಲ್ ತೆರೆದ ಸೇನಾ ವಾಹನದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು. ಫ್ರಾನ್ಸ್ ಅಧ್ಯಕ್ಷರನ್ನು ಪ್ರಧಾನಿ ಎಲಿಜಬೆತ್ ಬೊರ್ನೆ ಹಾಗೂ ಸೇನಾಧಿಕಾರಿಗಳು ಸ್ವಾಗತಿಸಿದರು. ಸೇನಾ ಗೌರವ ಸ್ವೀಕರಿಸಿದ ಮ್ಯಾಕ್ರೋನ್ ಬಳಿಕ ಪ್ರಧಾನಿ ಮೋದಿ ಬಳಿ ಆಗಮಿಸಿ ಆತ್ಮೀಯವಾಗಿ ಆಲಿಂಗಿಸಿಕೊಂಡರು.
ಫ್ರೆಂಚ್ ಅಧ್ಯಕ್ಷರ ಆಹ್ವಾನದ ಮೇರೆಗೆ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಮ್ಯಾಕ್ರೋನ್ ಸೇರಿದಂತೆ ಗಣ್ಯರು ತಮ್ಮ ಆಸೀನದಲ್ಲಿ ಕುಳಿತಕೊಂಡ ಬೆನ್ನಲ್ಲೇ ಸೇನೆಯ ವೈಮಾನಿಕ ಪ್ರದರ್ಶನ(ಫ್ಲೈಪಾಸ್ಟ್) ಆರಂಭಗೊಂಡಿತು. ಫ್ರೆಂಚ್ ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ಆಗಸದಲ್ಲಿ ಸೇನಾ ಏರ್‌ಕ್ರಾಫ್ಟ್ ಚಿತ್ತಾರ ಮೂಡಿಸಿತು. ಬಾಸ್ಟಿಲ್ ಡೇ ದಿನಾಚರಣೆಗೂ ಮುನ್ನ ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಫ್ರೆಂಚ್‌ನ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್' ಗೌರವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು.
ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾರತೀಯ ವಾಯುಪಡೆ:ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರೋನ್ ಮತ್ತು ಫ್ರಾನ್ಸ್‌ನ ಪಿಎಂ ಎಲಿಜಬೆತ್ ಬೊರ್ನೆ ಅವರು ಬಾಸ್ಟಿಲ್ ಡೇ ಪರೇಡ್‌ಗೆ ಮುಂಚಿತವಾಗಿ ಪ್ರಧಾನಿ ಮೋದಿಯನ್ನು ಬರಮಾಡಿಕೊಂಡರು. ಈ ವರ್ಷದ ಭೇಟಿ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವನ್ನು ಸಂಕೇತಿಸುತ್ತದೆ.
ಫ್ರಾನ್ಸ್ ಮತ್ತು ಭಾರತ ಈ ವರ್ಷ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳನ್ನು ಆಚರಿಸುತ್ತಿರುವ ಕಾರಣ ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಉಪಸ್ಥಿತಿ ಮಹತ್ವ ಪಡೆದುಕೊಂಡಿದೆ. 269 ಸದಸ್ಯರ ಭಾರತೀಯ ಮೂರು ಸೇನಾ ತುಕಡಿ ಬಾಸ್ಟಿಲ್ ಡೇ ಪರೇಡ್‌ನ ಭಾಗವಾಗಿದೆ. ಸೇನಾ ತುಕಡಿಯ ಭಾಗವಾಗಿ ಮೂರು ಭಾರತೀಯ ವಾಯುಪಡೆಯ ರಫೇಲ್ ಯುದ್ಧವಿಮಾನಗಳು ಸಹ ಪ್ಯಾರಿಸ್‌ನ ಚಾಂಪ್ಸ್ ಎಲಿಸೀಸ್‌ನಲ್ಲಿ ಬಾಸ್ಟಿಲ್ ಡೇ ಫ್ಲೈಪಾಸ್ಟ್‌ನಲ್ಲಿ ಭಾಗವಹಿಸಿವೆ.