ಪೇಶಾವರ: ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಕೆಚ್ ಜಿಲ್ಲೆಯ ಬುಲೆಡಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ವಾಹನದ ಮೇಲೆ ಸುಧಾರಿತ ಸ್ಫೋಟಕಗಳ ಮೂಲಕ ದಾಳಿ ನಡೆಸಿದರು. ಇದು ತೀವ್ರ ಗುಂಡಿನ ಚಕಮಕಿಗೆ ಕಾರಣವಾಯಿತು ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ತಿಳಿಸಿದೆ.
ದಾಳಿಗೆ ತಕ್ಷಣ ಪ್ರತಿಕ್ರಿಯೆ ಆರಂಭಿಸಿದ ಪಾಕಿಸ್ತಾನದ ಭದ್ರತಾ ಪಡೆ ಯೋಧರು ಮೂವರು ಭಯೋತ್ಪಾದಕರನ್ನು ಕೊಂದರು. ಆದಾಗ್ಯೂ ಕಾರ್ಯಾಚರಣೆಯಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದಾರೆ. ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಮಿಲಿಟರಿ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ.
ಈ ವಾರದ ಆರಂಭದಲ್ಲಿ 10 ರಿಂದ 12 ಶಸ್ತ್ರಸಜ್ಜಿತ ಉಗ್ರರು ವಾಯುವ್ಯ ಹೆದ್ದಾರಿಯಲ್ಲಿರುವ ಪೊಲೀಸ್ ಚೆಕ್ ಪಾಯಿಂಟ್ ಮೇಲೆ ದಾಳಿ ನಡೆಸಿ, ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬ ನಾಗರಿಕನನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದರು. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಕೋಹತ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ. ಮತ್ತೊಂದು ಘಟನೆಯಲ್ಲಿ, ಖೈಬರ್ನ ಲಕ್ಕಿ ಮಾರ್ವತ್ನಲ್ಲಿ ಈ ವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಮತ್ತು ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.