ಕಠ್ಮಂಡು(ನೇಪಾಳ):ವಿದೇಶಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಇಂದು ನೇಪಾಳದ ಮೌಂಟ್ ಎವರೆಸ್ಟ್ ಬಳಿ ಅಪಘಾತಕ್ಕೀಡಾಗಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಮೂಲವನ್ನು ಉಲ್ಲೇಖಿಸಿ ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಹೆಲಿಕಾಪ್ಟರ್ ಪೂರ್ವ ನೇಪಾಳದ ಲಮ್ಜುರಾ ಪ್ರದೇಶದಲ್ಲಿ ಪತನಗೊಂಡಿದ್ದು, ಐವರ ಮೃತದೇಹಗಳು ಪತ್ತೆಯಾಗಿವೆ ಎಂದು ಸರ್ಕಾರಿ ಆಡಳಿತಾಧಿಕಾರಿ ಬಸಂತ ಭಟ್ಟರಾಯ್ ತಿಳಿಸಿದ್ದಾರೆ. ನೇಪಾಳದ ಮೌಂಟ್ ಎವರೆಸ್ಟ್ ಬಳಿ ಮನಂಗ್ ಏರ್‌ನ ಹೆಲಿಕಾಪ್ಟರ್ ಇಂದು ಬೆಳಗ್ಗೆ ನಾಪತ್ತೆಯಾಗಿತ್ತು. ಹೆಲಿಕಾಪ್ಟರ್‌ನಲ್ಲಿ ಆರು ಮಂದಿ (ಐವರು ಪ್ರಯಾಣಿಕರು + ಕ್ಯಾಪ್ಟನ್) ಇದ್ದರು.
ಮನಂಗ್ ಏರ್ NA-MV ಹೆಲಿಕಾಪ್ಟರ್ ಸೋಲುಖುಂಬು ಜಿಲ್ಲೆಯ ಸುರ್ಕೆ ವಿಮಾನ ನಿಲ್ದಾಣದಿಂದ ಬೆಳಗ್ಗೆ 10:04ಕ್ಕೆ ಕಠ್ಮಂಡುವಿಗೆ ಹೊರಟಿತು. 10:13ಕ್ಕೆ 12,000 ಅಡಿ ಎತ್ತರದಲ್ಲಿ ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿತು ಎಂದು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಟಿಐಎ) ವ್ಯವಸ್ಥಾಪಕ ಜ್ಞಾನೇಂದ್ರ ಭುಲ್ ಹೇಳಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಹೆಲಿಕಾಪ್ಟರ್‌ನಲ್ಲಿ ಒಟ್ಟು ಆರು ಮಂದಿ ಇದ್ದರು. ಇದನ್ನು ಹಿರಿಯ ಕ್ಯಾಪ್ಟನ್ ಚೆಟ್ ಗುರುಂಗ್ ನಡೆಸುತ್ತಿದ್ದರು ಎಂದು ವರದಿಯಾಗಿತ್ತು.
ದೂರದ ಪರ್ವತ ಪ್ರದೇಶವಾದ ಸೊಲುಖುಂಬು ಜಿಲ್ಲೆಯ ಲಿಖುಪಿಕೆ ಗ್ರಾಮೀಣ ಪುರಸಭೆಯ ಲಮ್ಜುರಾ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ವಿವರವಾದ ವರದಿ ಬರಬೇಕಿದೆ ಎಂದು ಟಿಐಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಲಂಜುರಾ ಪಾಸ್‌ನಲ್ಲಿ ಸಮುದ್ರ ಮಟ್ಟದಿಂದ ಸುಮಾರು 3500 ಮೀಟರ್ ಎತ್ತರದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ದಿ ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. "ಅಪಘಾತದ ಸ್ಥಳದಿಂದ ಐದು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.