ಕೀವ್ (ಉಕ್ರೇನ್):ರಷ್ಯಾ ಮತ್ತು ಉಕ್ರೇನ್ ಮಧ್ಯೆ 3 ತಿಂಗಳಿಂದ ನಡೆಯುತ್ತಿರುವ ಯುದ್ಧ ಹಲವು ಪ್ರಾಣಗಳ ಬಲಿಗೆ ಕಾರಣವಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಯುದ್ಧದಲ್ಲಿ ಸೆರೆ ಸಿಕ್ಕ ರಷ್ಯಾ ಯೋಧನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದು ಯುದ್ಧದ ಮೊದಲ ಕ್ರಿಮಿನಲ್ ಪ್ರಕರಣವಾಗಿದೆ. ರಷ್ಯಾದ ಆಕ್ರಮಣದ ನಂತರದ ಮೊದಲ ಯುದ್ಧಾಪರಾಧಗಳ ವಿಚಾರಣೆಯಲ್ಲಿ ಉಕ್ರೇನ್ ನಾಗರಿಕರನ್ನು ಕೊಂದ ಆರೋಪದ ಮೇಲೆ 21 ವರ್ಷದ ರಷ್ಯಾದ ಸೈನಿಕನಿಗೆ ಉಕ್ರೇನ್ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಾರ್ಜೆಂಟ್ ವಾಡಿಮ್ ಶಿಶಿಮರಿನ್ ಶಿಕ್ಷೆಗೊಳಗಾದ ರಷ್ಯಾ ಯೋಧ. ಯುದ್ಧದ ಆರಂಭಿಕ ದಿನಗಳಲ್ಲಿ ಈಶಾನ್ಯ ಸುಮಿ ಪ್ರದೇಶದ ಹಳ್ಳಿಯೊಂದರಲ್ಲಿ ಉಕ್ರೇನಿಯನ್ ನಾಗರಿಕನ ತಲೆಗೆ ಗುಂಡು ಹಾರಿಸಿದ ಆರೋಪ ಹೊತ್ತಿದ್ದರು. ಉಕ್ರೇನ್ ಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ರಷ್ಯಾ ಯೋಧ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ತಾನು ಹಾಗೆ ಮಾಡಲು ಮೇಲಧಿಕಾರಿ ಆದೇಶಿಸಿದ ನಂತರ ನಾಗರಿಕನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಹತನಾದ ಉಕ್ರೇನಿಯನ್ ವ್ಯಕ್ತಿ, ರಷ್ಯಾ ಪಡೆಗಳು ಇರುವ ಜಾಗದ ಬಗ್ಗೆ ಉಕ್ರೇನಿಯನ್ ಪಡೆಗಳಿಗೆ ಮಾಹಿತಿ ನೀಡುತ್ತಿದ್ದ.
ಈ ವೇಳೆ ಆತನನ್ನು ಗುಂಡಿಕ್ಕಲು ಅಧಿಕಾರಿಯೊಬ್ಬರು ಹೇಳಿದ್ದಕ್ಕೆ ಗುಂಡಿಕ್ಕಿದೆ. ಈ ಕೃತ್ಯಕ್ಕಾಗಿ ನನ್ನನ್ನು ಕ್ಷಮಿಸಬೇಕು ಎಂದು ರಷ್ಯಾ ಯೋಧ ನ್ಯಾಯಾಲಯಕ್ಕೆ ಕೇಳಿಕೊಂಡಿದ್ದಾನೆ. ಉಕ್ರೇನಿಯನ್ ಪ್ರಾಸಿಕ್ಯೂಟರ್‌ಗಳು ಸಾವಿರಾರು ಸಂಭಾವ್ಯ ಯುದ್ಧ ಅಪರಾಧಿಗಳನ್ನು ತನಿಖೆ ಮಾಡುತ್ತಿದ್ದಾರೆ.