ಜಗತ್ತಿನಲ್ಲಿ ಅತ್ಯಂತ ಆತಂಕಕ್ಕೀಡುವ ಮಾಡುವ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದು. ಆದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಗುದನಾಳದ ಕ್ಯಾನ್ಸರ್ಗೆ ಪ್ರಾಯೋಗಿಕ ಚಿಕಿತ್ಸೆ ನೀಡಿದ್ದು ಎಲ್ಲ ರೋಗಿಗಳು ಮಾರಕ ಕಾಯಿಲೆಯಿಂದ ಮುಕ್ತರಾಗಿದ್ದಾರೆ.
ನ್ಯೂಯಾರ್ಕ್ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ನಲ್ಲಿ ಈ ವೈದ್ಯಕೀಯ ಪ್ರಯೋಗ ನಡೆದಿದೆ. ಇದರಲ್ಲಿ ಪ್ರಾಯೋಗಿಕ ಚಿಕಿತ್ಸೆ ಪಡೆದ 18 ಜನರ ಗುದನಾಳದ ಕ್ಯಾನ್ಸರ್ ದೂರವಾಗಿದೆ. ಸುಮಾರು ಆರು ತಿಂಗಳ ಕಾಲ ದೋಸ್ಟಾರ್ಲಿಮಾಬ್ (Dostarlimab) ಎಂಬ ಔಷಧಿ ಪಡೆದ ನಂತರ ಪ್ರತಿಯೊಬ್ಬರಲ್ಲೂ ಕ್ಯಾನ್ಸರ್ ಗೆಡ್ಡೆಗಳು ಮಾಯವಾಗಿವೆ ಎಂದು ವರದಿಯಾಗಿದೆ.
ಕ್ಯಾನ್ಸರ್ ಇತಿಹಾಸದಲ್ಲೇ ಮೊದಲ ಬಾರಿಗೆ ಈ ವಿಶೇಷ ಚಿಕಿತ್ಸೆಯ ಮೂಲಕ ಕಾಯಿಲೆ ಗುಣಮುಖವಾಗಿದೆ ಎಂದು ಕ್ಯಾನ್ಸರ್ ಸೆಂಟರ್ನ ಡಾ.ಲೂಯಿಸ್ ಎ.ಡಯಾಜ್ ತಿಳಿಸಿದ್ದಾರೆ. ದೋಸ್ಟಾರ್ಲಿಮಾಬ್ ಔಷಧಿಯು ಮಾನವನ ದೇಹದಲ್ಲಿ ಪ್ರತಿಕಾಯಗಳನ್ನು ಬದಲಿಸುತ್ತದೆ. ಕ್ಯಾನ್ಸರ್ ರೋಗವನ್ನು ದೈಹಿಕ ಪರೀಕ್ಷೆ, ಎಂಡೋಸ್ಕೋಪಿ- ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಅಥವಾ ಪಿಇಟಿ ಸ್ಕ್ಯಾನ್ ಅಥವಾ ಎಂಆರ್‌ಐ ಸ್ಕ್ಯಾನ್‌ಗಳಿಂದಲೂ ಅನೇಕ ಬಾರಿ ಕಂಡುಹಿಡಿಯಲು ಆಗುವುದಿಲ್ಲ. ಆದರೀಗ, ಮಾರಣಾಂತಿಕ ರೋಗವನ್ನು ಗುಣಪಡಿಸಲು ದೋಸ್ಟಾರ್ಲಿಮಾಬ್ ಒಂದು ಸಮರ್ಥ ಔಷಧಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.