ವಾಷಿಂಗ್ಟನ್(ಅಮೆರಿಕಾ): ನ್ಯೂಯಾರ್ಕ್‌ನ ರಾಕ್‌ಲ್ಯಾಂಡ್ ಕೌಂಟಿಯಲ್ಲಿ ಸುಮಾರು ಒಂದು ದಶಕದ ನಂತರ 'ಮೊದಲ ಪೋಲಿಯೊ ಪ್ರಕರಣ' ದೃಢಪಟ್ಟಿದೆ ಎಂದು ಸ್ಥಳೀಯ ಮತ್ತು ರಾಜ್ಯ ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪೋಲಿಯೊ ಹೇಗೆ ಹರಡುತ್ತದೆ?: ವಿಶ್ವ ಆರೋಗ್ಯ ಸಂಘಟನೆ (ಡಬ್ಲೂಹೆಚ್ಒ) ಪೋಲಿಯೊ ಅಥವಾ ಪೋಲಿಯೊಮೈಲಿಟಿಸ್ ಅನ್ನು ಸಾಂಕ್ರಾಮಿಕ ಕಾಯಿಲೆಯೆಂದು ಘೋಷಿಸಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಮುಖ್ಯವಾಗಿ ಮಲ-ಮೌಖಿಕ ಮಾರ್ಗದ ಮೂಲಕ ಹೆಚ್ಚಾಗಿ ಹರಡುತ್ತದೆ. ಕಲುಷಿತ ನೀರು ಅಥವಾ ಆಹಾರ ಸೇವನೆಯ ಮೂಲಕವೂ ಹರಡಬಲ್ಲದು. ಆದರೆ, ಈ ರೀತಿ ಹರಡುವ ಸಾಧ್ಯತೆ ಕೊಂಚ ಕಡಿಮೆ. ಈ ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅವರಲ್ಲಿ ಸ್ನಾಯು ದೌರ್ಬಲ್ಯವನ್ನು ಉಂಟು ಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಪಾರ್ಶ್ವವಾಯು ಅಥವಾ ಸಾವಿಗೆ ಕಾರಣವಾಗಬಹುದು.
ಆರೋಗ್ಯ ತಜ್ಞರು ಹೇಳುವುದೇನು?: "ಪೋಲಿಯೊ ಸೋಂಕಿಗೊಳಗಾದ ಶೇ 95 ರಷ್ಟು ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಆದರೂ ಅವರು ವೈರಸ್ ಹರಡಬಹುದು" ಎಂದು ಕೌಂಟಿ ಹೆಲ್ತ್ ಕಮಿಷನರ್ ಡಾ.ಪೆಟ್ರಿಸಿಯಾ ಸ್ಕ್ನಾಬೆಲ್ ರಪ್ಪರ್ಟ್ ಎಚ್ಚರಿಸಿದ್ದಾರೆ.