ಕರ್ನಾಟಕ

karnataka

ETV Bharat / international

ಆಪರೇಷನ್​ ಅಜಯ್​: ಇಂದು ರಾತ್ರಿ 230 ಜನರಿರುವ ಮೊದಲ ವಿಮಾನ ಇಸ್ರೇಲ್​ನಿಂದ ಭಾರತಕ್ಕೆ - Operation Ajay

ಯುದ್ಧಪೀಡಿತ ಇಸ್ರೇಲ್​ನಿಂದ 230 ಜನರನ್ನು ಹೊತ್ತ ಮೊದಲ ವಿಮಾನ ಇಂದು ರಾತ್ರಿ ಭಾರತಕ್ಕೆ ಪ್ರಯಾಣಿಸಲಿದೆ.

ಇಸ್ರೇಲ್​ನಿಂದ ಭಾರತಕ್ಕೆ ಪ್ರಯಾಣ
ಇಸ್ರೇಲ್​ನಿಂದ ಭಾರತಕ್ಕೆ ಪ್ರಯಾಣ

By ETV Bharat Karnataka Team

Published : Oct 12, 2023, 4:52 PM IST

ಜೆರುಸಲೇಂ:ಪ್ಯಾಲೆಸ್ಟೀನ್ ಉಗ್ರಗಾಮಿ ಸಂಘಟನೆ ಹಮಾಸ್‌ ಜೊತೆಗೆ ತೀವ್ರ ಯುದ್ಧ ನಡೆಸುತ್ತಿರುವ ಇಸ್ರೇಲ್‌, ಗಾಜಾ ಪಟ್ಟಿಯನ್ನು ಧ್ವಂಸಗೊಳಿಸುತ್ತಿದೆ. ಎರಡು ರಾಷ್ಟ್ರಗಳ ಮಧ್ಯೆ ಸಂಘರ್ಷ ಜೋರಾಗಿದ್ದು ಬಾಂಬ್​, ರಾಕೆಟ್​ಗಳು ಉಭಯ ದೇಶಗಳಲ್ಲಿ ವಿಧ್ವಂಸಕತೆ ಸೃಷ್ಟಿಸುತ್ತಿವೆ. ಈ ಮಧ್ಯೆ ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಭಾರತ 'ಆಪರೇಷನ್​ ಅಜಯ್​' ಕಾರ್ಯಾಚರಣೆ ಆರಂಭಿಸಿದ್ದು, 230 ಜನರನ್ನು ಹೊತ್ತ ಮೊದಲ ವಿಮಾನ ಇಂದು (ಗುರುವಾರ) ರಾತ್ರಿ 9 ಗಂಟೆಗೆ ಅಲ್ಲಿಂದ ಹೊರಡಲಿದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 7 ರಂದು ಯುದ್ಧ ಆರಂಭವಾದ ಬಳಿಕ ಏರ್ ಇಂಡಿಯಾ ವಿಮಾನಸಂಸ್ಥೆ ತನ್ನ ಸಂಚಾರವನ್ನು ತಕ್ಷಣದಿಂದಲೇ ನಿಲ್ಲಿಸುವುದಾಗಿ ಘೋಷಿಸಿತ್ತು. ಹೀಗಾಗಿ ಅಲ್ಲಿಂದ ಬರಲಾಗದೇ ಸಿಲುಕಿರುವ ಜನರಿಗೆ ಭಾರತ ಸರ್ಕಾರ ವಿಮಾನದ ವ್ಯವಸ್ಥೆ ಮಾಡಿದೆ. ಯಾವುದೇ ಶುಲ್ಕವಿಲ್ಲದೇ ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿದೆ.

ಈ ಬಗ್ಗೆ ಅಕ್ಟೋಬರ್​ 11 ರಂದು ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದ ವಿದೇಶಾಂಗ ಸಚಿವ ಡಾ.ಎಸ್​. ಜೈಶಂಕರ್​, ಹಮಾಸ್​ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿದೆ. ಇದಕ್ಕಾಗಿ 'ಆಪರೇಷನ್ ಅಜಯ್' ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಘೋಷಿಸಿದ್ದರು. ಇದರ ಭಾಗವಾಗಿ ಗುರುವಾರ ಇಸ್ರೇಲ್‌ನಿಂದ ಹೊರಡುವ ಮೊದಲ ರಕ್ಷಣಾ ವಿಮಾನದ ಸಿದ್ಧತೆಗಳ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.

ಸಹಾಯವಾಣಿ ಆರಂಭ:ಇಸ್ರೇಲ್​ನಿಂದ ತೆರಳಲು ಬಯಸುವ ಮತ್ತು ನೆರವು ಅಗತ್ಯವಿರುವ ಭಾರತೀಯ ನಾಗರಿಕರಿಗಾಗಿ ಇಸ್ರೇಲ್​ನಲ್ಲಿರುವ ಭಾರತದ ರಾಯಭಾರಿ ಕಚೇರಿ ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿ ಆರಂಭಿಸಿದೆ. ಈ ಬಗ್ಗೆ ಪ್ರತಿ ಭಾರತೀಯರಿಗೆ ಇಮೇಲ್​ ಮೂಲಕ ಮಾಹಿತಿ ನೀಡಿದೆ. ಸಹಾಯದ ಅಗತ್ಯವಿರುವ ಭಾರತೀಯರು ಟೆಲ್ ಅವಿವ್ ಮತ್ತು ರಾಮಲ್ಲಾದಲ್ಲಿ ಆರಂಭಿಸಲಾಗಿರುವ ತುರ್ತು ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಹೇಳಿದೆ.

ಇದರ ಜೊತೆಗೆ ಎಕ್ಸ್​ನಲ್ಲೂ ಮಾಹಿತಿ ನೀಡಿರುವ ರಾಯಭಾರಿ ಕಚೇರಿ, 'ಭಾರತಕ್ಕೆ ತೆರಳಲು ಬಯಸುವ ನಾಗರಿಕರು ಸಹಾಯವಾಣಿ ಮೂಲಕ ಮಾಹಿತಿ ನೀಡಿ. ಅವರನ್ನು ತಾಯ್ನಾಡಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು' ಎಂದು ಹೇಳಿದೆ. ಮುಂಬೈನಲ್ಲಿರುವ ಇಸ್ರೇಲ್‌ನ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಅವರು ನೀಡಿದ ಮಾಹಿತಿಯಂತೆ, ಇಸ್ರೇಲ್​​ನಲ್ಲಿ 20,000 ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ.

ಹಮಾಸ್​-ಇಸ್ರೇಲ್​ ಸಂಘರ್ಷ:ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್​ ಮೇಲೆ ಭೀಕರ ದಾಳಿ ನಡೆಸಿತು. ಇದರ ವಿರುದ್ಧ ಇಸ್ರೇಲ್​ ಕೂಡ ತಿರುಗಿಬಿದ್ದಿದ್ದು, ಸತತವಾಗಿ ರಾಕೆಟ್​, ಬಾಂಬ್​ಗಳ ಸುರಿಮಳೆ ಸುರಿಸುತ್ತಿದೆ. ಯುದ್ಧ ಆರಂಭವಾಗಿ ಆರು ದಿನಗಳಾಗಿದ್ದು, ಈವರೆಗೂ 2200 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಇಸ್ರೇಲ್​ನ 189 ಸೈನಿಕರು ಸೇರಿದಂತೆ 1,200 ಕ್ಕೂ ಹೆಚ್ಚು ಜನರು ಹತರಾಗಿದ್ದರೆ, ಗಾಜಾದಲ್ಲಿ ಕನಿಷ್ಠ 1,200 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಇಸ್ರೇಲ್ ಕೇವಲ ಆರಂಭಿಕ ಟಾರ್ಗೆಟ್': ಹಮಾಸ್ ಕಮಾಂಡರ್ ಮಹಮೂದ್​ ಅಲ್​ ಜಹರ್ ಹೇಳಿಕೆ... ವಿಡಿಯೋ

ABOUT THE AUTHOR

...view details