ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ನಾಲ್ಕು ದೇಶಗಳ ನಾಯಕರು ಪಾಲ್ಗೊಂಡಿದ್ದ I2U2ನ ಮೊದಲ ಶೃಂಗಸಭೆಯಲ್ಲಿ ಭಾರತಕ್ಕೆ ಎರಡು ಮಹತ್ವದ ಯೋಜನೆಗಳು ಲಭಿಸಿವೆ. ಭಾರತ ಮತ್ತು ಯುಎಇ ಪಾಲುದಾರಿಕೆಯಲ್ಲಿ ಆಹಾರ ಕಾರಿಡಾರ್ ನಿರ್ಮಾಣ ಮತ್ತು ದ್ವಾರಕಾದಲ್ಲಿ ನವೀಕರಿಸಬಹುದಾದ ಇಂಧನ ಕೇಂದ್ರ ಸ್ಥಾಪನೆ ಶೃಂಗದಲ್ಲಿ ದೇಶಕ್ಕೆ ದೊರೆತ ಮಹತ್ವದ ಯೋಜನೆಗಳು.
ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, "ಇದು ನಿಜವಾದ ಅರ್ಥದಲ್ಲಿ ಕಾರ್ಯತಂತ್ರದ ಪಾಲುದಾರರ ಸಭೆ. ನಾವೆಲ್ಲರೂ ಒಳ್ಳೆಯ ಸ್ನೇಹಿತರು. ಒಂದೇ ದೃಷ್ಟಿಕೋನ ಹಾಗೂ ಆಲೋಚನೆಗಳನ್ನು ಹೊಂದಿದ್ದೇವೆ. ಶೃಂಗಸಭೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳನ್ನು ಗುರುತಿಸಲಾಗಿದೆ ಮತ್ತು ಅವುಗಳಲ್ಲಿ ಮುಂದುವರಿಯಲು ಮಾರ್ಗಸೂಚಿಯನ್ನು ಸಹ ನೀಡಲಾಗಿದೆ" ಎಂದು ತಿಳಿಸಿದರು.
ಯುಎಇ $2 ಬಿಲಿಯನ್ ಹೂಡಿಕೆ:ಸಭೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯ ಪ್ರಕಾರ, I2U2 ಪಾಲುದಾರಿಕೆಯ ಅಡಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಭಾರತದಲ್ಲಿ ಸಮಗ್ರ ಆಹಾರ ಪಾರ್ಕ್ ಸ್ಥಾಪಿಸಲು ಸುಮಾರು 2 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಸುಧಾರಿತ ಫುಡ್ ಪಾರ್ಕ್‌ಗಳಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನದ ಸಹಾಯದಿಂದ ನೀರಿನ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಈ ಯೋಜನೆ ಆಹಾರ ವ್ಯರ್ಥವಾಗುವುದನ್ನು ತಡೆಯುತ್ತದೆ.