ಅಥೆನ್ಸ್ (ಗ್ರೀಸ್) :ಗ್ರೀಸ್‌ನ 82 ಸ್ಥಳಗಳಲ್ಲಿ ವ್ಯಾಪಿಸಿರುವ ಕಾಳ್ಗಿಚ್ಚು ನಂದಿಸಲು ಅಗ್ನಿಶಾಮಕ ಪಡೆಗಳು ಹರಸಾಹಸ ಪಡುತ್ತಿವೆ. ಈ ಪೈಕಿ ಭಾನುವಾರದಂದು 64 ಸ್ಥಳಗಳಲ್ಲಿ ಹೊಸದಾಗಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ರಾತ್ರಿ ಸಮಯದಲ್ಲಿ ಅಗ್ನಿಶಾಮಕ ವಿಮಾನ ಹಾಗೂ ಹೆಲಿಕಾಪ್ಟರ್ಗಳು ಸಂಚರಿಸಲು ಸಾಧ್ಯವಾಗದ ಕಾರಣದಿಂದ ಅಗ್ನಿಶಾಮಕ ಪಡೆ ಸಿಬ್ಬಂದಿಗೆ ಬೆಂಕಿ ನಂದಿಸುವುದು ಸವಾಲಾಗಿದೆ.
ರೋಡ್ಸ್ ದ್ವೀಪದಲ್ಲಿ ಅತ್ಯಂತ ಗಂಭೀರವಾದ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿ ಸತತ ಆರನೇ ದಿನವೂ ಕಾಳ್ಗಿಚ್ಚು ಉರಿಯುತ್ತಿರುವುದರಿಂದ ದ್ವೀಪದ ಹಲವಾರು ಸ್ಥಳಗಳಿಂದ ಸುಮಾರು 19,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಗ್ರೀಕ್ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ರಾತ್ರಿ ಹೊಸದಾಗಿ ಯಾರನ್ನೂ ಸ್ಥಳಾಂತರ ಮಾಡಲಾಗಿಲ್ಲ. ಆದರೆ, ಕಾಳ್ಗಿಚ್ಚಿನ ಕಾರಣದಿಂದ 19 ಸಾವಿರ ಜನರನ್ನು ಸ್ಥಳಾಂತರಿಸಿರುವುದು ಇದೇ ಮೊದಲು ಎಂದು ಹವಾಮಾನ ಬದಲಾವಣೆ ಮತ್ತು ನಾಗರಿಕ ಸಂರಕ್ಷಣಾ ಸಚಿವಾಲಯ ಎಂದು ಹೇಳಿದೆ.
12 ಗ್ರಾಮಗಳಿಂದ ಜನರ ಸ್ಥಳಾಂತರ:12 ಗ್ರಾಮಗಳು ಮತ್ತು ಹಲವಾರು ಹೋಟೆಲ್‌ಗಳಿಂದ 16,000 ಜನರನ್ನು ಭೂಮಿ ಮತ್ತು 3,000 ಸಮುದ್ರ ಮಾರ್ಗದ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೋಟೆಲ್ನಿಂದ ಸ್ಥಳಾಂತರಿಸುವ ಸಂದರ್ಭದಲ್ಲಿ ಬಿದ್ದು ಕಾಲು ಮುರಿದುಕೊಂಡ ವ್ಯಕ್ತಿ ಮತ್ತು ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಳ್ಗಿಚ್ಚು ನಂದಿಸಲು ಯುರೋಪಿಯನ್ ಯೂನಿಯನ್ ದೇಶಗಳಿಂದ ಸಹಾಯ ಹರಿದು ಬರುತ್ತಿದೆ. ದೇಶದಾದ್ಯಂತ ಕಾಣಿಸಿಕೊಂಡ ಕಾಳ್ಗಿಚ್ಚು ನಂದಿಸಲು ಯುರೋಪಿಯನ್ ಯುನಿಯನ್ ದೇಶಗಳ 450 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಮತ್ತು ಏಳು ವಿಮಾನಗಳು ಗ್ರೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಯುರೋಪಿಯನ್ ಯುನಿಯನ್ ಮಾನವೀಯ ನೆರವು ಮತ್ತು ಬಿಕ್ಕಟ್ಟು ನಿರ್ವಹಣೆಯ ಆಯುಕ್ತ ಜಾನೆಜ್ ಲೆನಾರ್ಸಿಕ್ ಭಾನುವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.