ಲಿಮ(ಪೆರು): ಶುಕ್ರವಾರ ತಡರಾತ್ರಿ ದಕ್ಷಿಣ ಪೆರುವಿನ ಗಣಿಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೆರು ದೇಶದ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವದ ಅಗ್ರ ಹಾಗು ಎರಡನೇ ಅತಿದೊಡ್ಡ ತಾಮ್ರ ಉತ್ಪಾದಿಸುವ ದೇಶ ಪೆರು. ಇಲ್ಲಿನ ಚಿನ್ನದ ಗಣಿಯಲ್ಲಿ ಶುಕ್ರವಾರ ತಡರಾತ್ರಿ ಅಥವಾ ಶನಿವಾರದ ಆರಂಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ವರದಿಗಳ ಪ್ರಕಾರ, ಜ್ವಾಲೆಗೆ 27 ಮಂದಿ ಕಾರ್ಮಿಕರು ಅಸುನೀಗಿದ್ದು, ಇದುವರೆಗೆ 175 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಯಾನಾಕ್ವಿಹುವಾ ಗಣಿಗಾರಿಕೆ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಮೃತಪಟ್ಟಿರುವ 27 ಮಂದಿ ಕಾರ್ಮಿಕರು ಓರ್ವ ಗುತ್ತಿಗೆದಾರರೊಬ್ಬರ ನೇತೃತ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ:ಅಮೆರಿಕದಲ್ಲಿ ಗುಂಡಿನ ದಾಳಿ: ತೆಲಂಗಾಣ ನ್ಯಾಯಾಧೀಶರ ಮಗಳು ಸಾವು
ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿರುವ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ನಿಂದ ಸ್ಫೋಟ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಸ್ಪೋಟವು ಭೂ ಮೇಲ್ಮೈನಿಂದ ಸುಮಾರು 100 ಮೀಟರ್(330 ಅಡಿ) ಭಾಗದಲ್ಲಿ ಉಂಟಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಸಂಬಂಧಿಕರನ್ನು ಯಾನಾಕ್ವಿಹುವಾದಲ್ಲಿನ ಗಣಿಯಲ್ಲಿಗೆ ಬಸ್ಗಳ ಮೂಲಕ ಕರೆಸಲಾಗಿದೆ. ಸಂಬಂಧಿಕರಿಗೆ ಭದ್ರತಾ ಏಜೆಂಟರು ಘಟನೆಯ ಕುರಿತು ವಿವರಿಸಿದ್ದು, ತಮ್ಮ ತಮ್ಮ ಪ್ರೀತಿಪಾತ್ರರ ಮೃತದೇಹಕ್ಕಾಗಿ ಗಣಿ ಪ್ರವೇಶದ ಬಳಿಯೆ ಕುಳಿತಿದ್ದು ಆಕ್ರಂದನ ಮುಗಿಲು ಮುಟ್ಟುವಂತಿತ್ತು.