ಬಾಗ್ದಾದ್ (ಇರಾಕ್) : ಮದುವೆ ಮಂಟಪವೊಂದರಲ್ಲಿ ಸಂಭವಿಸಿದ ಭಾರಿ ಪ್ರಮಾಣದ ಅಗ್ನಿ ಅವಘಡದಿಂದಾಗಿ ಕನಿಷ್ಠ 100 ಜನರು ಸಾವನ್ನಪ್ಪಿದ್ದು, 150ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಉತ್ತರ ಇರಾಕ್‌ನಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಬಾಗ್ದಾದ್‌ನ ವಾಯುವ್ಯಕ್ಕೆ 335 ಕಿಲೋ ಮೀಟರ್ ದೂರದಲ್ಲಿರುವ ನಿನೆವೆ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿ ದುರಂತ ಘಟಸಿತು. ಇಲ್ಲಿ ಕ್ರಿಶ್ಚಿಯನ್ನರೇ ಹೆಚ್ಚಿನ ಪ್ರಮಾಣದಲ್ಲಿ ವಾಸಿಸುತ್ತಿದ್ದು, ಮದುವೆ ಸಭಾಂಗಣದೊಳಗೆ ಸುಟ್ಟುಹೋದ ಅವಶೇಷಗಳ ದೃಶ್ಯಾವಳಿಗಳನ್ನು ಸ್ಥಳೀಯ ಟೆಲಿವಿಷನ್ ಮಾಧ್ಯಮಗಳು ಪ್ರಸಾರ ಮಾಡಿವೆ. ಆರೋಗ್ಯ ಸಚಿವಾಲಯದ ವಕ್ತಾರ ಸೈಫ್ ಅಲ್ - ಬದರ್ ಘಟನೆಯ ಕುರಿತು ಬುಧವಾರ ಮಾಹಿತಿ ನೀಡಿದ್ದಾರೆ.
ಗಾಯಗೊಂಡವರಲ್ಲಿ ಕೆಲವರನ್ನು ಪ್ರಾದೇಶಿಕ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಿನೆವೆ ಪ್ರಾಂತೀಯ ಗವರ್ನರ್ ನಜೀಮ್ ಅಲ್ ಜುಬೌರಿ ಹೇಳಿದ್ದಾರೆ. ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ಸ್ಥಳೀಯ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಪಟಾಕಿ ಹಚ್ಚಿರುವುದರಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ತನಿಖೆ ಮುಂದುವರೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಾಗರಿಕ ರಕ್ಷಣೆ ಇಲಾಖೆ ಅಧಿಕಾರಿಗಳು, ಕಡಿಮೆ ವೆಚ್ಚದ ಸಾಮಗ್ರಿಗಳನ್ನು ಬಳಸಿ ಕಟ್ಟಡ ನಿರ್ಮಾಣ ಮಾಡಿದ ಪರಿಣಾಮ ಬೆಂಕಿ ಹೊತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಹಾಲ್‌ನ ಕೆಲ ಭಾಗಗಳು ಕುಸಿದಿವೆ. ಜೊತೆಗೆ, ಮದುವೆ ಮಂಟಪವು ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳನ್ನು ಸಹ ಒಳಗೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ.