ಹೆಲ್ಸಿಂಕಿ (ಫಿನ್‌ಲ್ಯಾಂಡ್): ಜಗತ್ತಿನ ಅತ್ಯಂತ ಯುವ ಪ್ರಧಾನಿ ಎಂದೇ ಖ್ಯಾತರಾದ ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ವಿವಾದಕ್ಕೆ ಸಿಲುಕಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಪ್ರಧಾನಿ ಮರಿನ್ ಪಾರ್ಟಿ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಪರ ಮತ್ತು ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇವಲ 36 ವರ್ಷದ ಪ್ರಧಾನಿಯಾದ ಸನ್ನಾ ಮರಿನ್ ಕೆಲವರೊಂದಿಗೆ ಪಾರ್ಟಿ ಮಾಡಿ, ಕುಣಿದು ಕುಪ್ಪಳಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಈ ವಿಡಿಯೋ ತುಣುಕು ಹಾರಿದಾಡುತ್ತಿದ್ದು, ಸಾಕಷ್ಟು ಜನರು ಹಂಚಿಕೊಂಡಿದ್ದಾರೆ.
ಖಾಸಗಿ ಅಪಾರ್ಟ್ಮೆಂಟ್ವೊಂದರಲ್ಲಿ ಪ್ರಧಾನಿ ಮರಿನ್ ಮತ್ತು ಇತರರು ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಮೊದಲಿಗೆ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ವೀಡಿಯೊ ಅಪ್‌ಲೋಡ್ ಮಾಡಲಾಗಿತ್ತು. ನಂತರ ಅದು ಸೋರಿಕೆಯಾಗಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಸಾರಾಯಿ ಕುಡಿದು ದೇಶ ಉದ್ಧರಿಸಿ: ಜಪಾನ್ ಸರ್ಕಾರದಿಂದ ಕುಡಿತಕ್ಕೆ ಪ್ರಚೋದನೆ
ಅಲ್ಲದೇ, ಪ್ರಧಾನಿ ಮರಿನ್ ಅವರೊಂದಿಗೆ ವಿಡಿಯೋದಲ್ಲಿ ಕಾಣಿಸಿಕೊಂಡು ಎಲ್ಲರೂ ಕೂಡ ಫಿನ್‌ಲ್ಯಾಂಡ್ ಖ್ಯಾತನಾಮರೇ ಆಗಿದ್ದಾರೆ. ಮರಿನ್ ಅವರ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಸಂಸತ್ ಸದಸ್ಯರಾದ ಇಲ್ಮರಿ ನೂರ್ಮಿನೆನ್ ಸೇರಿದಂತೆ ಒಬ್ಬ ಜನಪ್ರಿಯ ಗಾಯಕ, ಖ್ಯಾತ ಯೂಟ್ಯೂಬರ್, ರೇಡಿಯೋ ಮತ್ತು ಟಿವಿ ಹೋಸ್ಟ್ ಸೇರಿ ಹಲವರು ಇದ್ದಾರೆ ಎಂದು ವರದಿಯಾಗಿದೆ.
ಆದರೆ, ಈ ಪಾರ್ಟಿ ಯಾವಾಗ ನಡೆದಿದೆ?. ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂದು ಖಚಿತವಾಗಿಲ್ಲ. ಆದರೆ, ಇದೊಂದು ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನಡೆದ ಪಾರ್ಟಿ ಎಂಬುವುದಾಗಿ ಮಾತ್ರವೇ ಖಾತ್ರಿಗೊಳಿಸಲಾಗಿದೆ.
ಪರ ಮತ್ತು ವಿರೋಧ ಪ್ರತಿಕ್ರಿಯೆ: ಪ್ರಧಾನಿ ಮರಿನ್ ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಬಳಕೆದಾರರಿಂದಲೂ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಫಿನ್‌ಲ್ಯಾಂಡ್ ಜನತೆಯೇ ಪರ ಮತ್ತು ವಿರೋಧ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಕೆಲವರು ಮರಿನ್ ಅವರನ್ನು ಟೀಕಿಸಿದ್ದರೆ, ಮತೆ ಕೆಲವರು ಅವರನ್ನು ಬೆಂಬಲಿಸಿದ್ದಾರೆ.
ಪ್ರಧಾನಿ ಪಾರ್ಟಿ ಮಾಡುವುದು ಸಹಜ. ತಮ್ಮ ಬಿಡುವಿನ ವೇಳೆಯಲ್ಲಿ ಸ್ವಲ್ಪ ಮೋಜು ಮಾಡುತ್ತಾರೆ. ಅದನ್ನೇಕೆ ದೊಡ್ಡ ವಿಷಯ ಮಾಡುತ್ತೀರಿ ಎಂದೂ ಹಲವರು ಪ್ರಧಾನಿ ಮರಿನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದೇ ವೇಳೆ ಮರಿನ್ ಹುದ್ದೆಯ ಘನತೆ ಆಧಾರವಾಗಿರಿಸಿಕೊಂಡು ಕೂಡ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದು, ಪ್ರಧಾನಿಯ ವೀಡಿಯೊ ಅಸಹ್ಯಕರವೆಂದು ಟೀಕಿಸಿದ್ದಾರೆ. ಇದು ಪ್ರಧಾನಿಯವರ ಸ್ವೀಕಾರಾರ್ಹ ನಡವಳಿಕೆಯೇ ಎಂದೂ ಕೆಲವರು ಪ್ರಶ್ನೆಗಳನ್ನು ಮಾಡಿದ್ದಾರೆ.
ಮತ್ತೊಂದೆಡೆ ಪ್ರಧಾನಿ ಮರಿನ್ ಈ ರೀತಿ ಟೀಕೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೋವಿಡ್ಗೆ ಸೋಂಕಿಗೆ ಮರಿನ್ ಒಳಗಾಗಿದ್ದರು. ಆದರೂ, ಅವರು ವಾರಾಂತ್ಯದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂಬುವುದು ಬೆಳಕಿಗೆ ಬಂದಿತ್ತು. ಈ ವಿಷಯವಾಗಿ ನಂತರ ಸ್ವತಃ ಅವರೇ ಕ್ಷಮೆಯನ್ನೂ ಕೇಳಿದ್ದರು. ಇನ್ನು, 2019ರಲ್ಲಿ ಫಿನ್‌ಲ್ಯಾಂಡ್ ಪ್ರಧಾನಿ ಹುದ್ದೆಗೇರಿರುವ ಸನ್ನಾ ಮರಿನ್ ವಿಶ್ವದ ಅತಂತ್ಯ ಕಿರಿಯ ಪ್ರಧಾನಿಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ತಮ್ಮ 34ನೇ ವಯಸ್ಸಿಗೆ ಮರಿನ್ ಪ್ರಧಾನಿಯಾಗಿದ್ದರು.
ಇದನ್ನೂ ಓದಿ:ಪತ್ನಿ ಅಕ್ಷತಾ ಜೊತೆ ದೇವಸ್ಥಾನಕ್ಕೆ ರಿಷಿ ಸುನಕ್ ಭೇಟಿ: ಮನೆಯಲ್ಲಿ ಕೃಷ್ಣಜನ್ಮಾಷ್ಟಮಿ ಸಂಭ್ರಮ