ಕೋಪನ್ ಹೇಗನ್: ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರ ಪಾರ್ಟಿಯ ವೀಡಿಯೊ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಂತರ ಅವರನ್ನು ತೀವ್ರವಾಗಿ ಟೀಕಿಸಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ 36 ವರ್ಷದ ಪ್ರಧಾನಿ ಸನಾ ಮರಿನ್ ತನ್ನ ಸ್ನೇಹಿತರೊಂದಿಗೆ ಡ್ಯಾನ್ಸ್, ಸಾಂಗ್ ಮತ್ತು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ನಡೆದ ಖಾಸಗಿ ಪಾರ್ಟಿಯಲ್ಲಿ ಪಿಎಂ ಮರಿನ್ ವಿರುದ್ಧ ಡ್ರಗ್ಸ್ ಸೇವನೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮೌನ ಮುರಿದ ಪಿಎಂ ಮರಿನ್, ನಾನು ಡ್ರಗ್ಸ್ ಸೇವನೆ ಮಾಡಿಲ್ಲ. ಇದನ್ನೂ ಸಾಬೀತು ಪಡಿಸಿಕೊಳ್ಳಲು ನಾನು ಯಾವುದೇ ಪರೀಕ್ಷೆಗೆ ಒಳಗಾಗುವುದಕ್ಕೆ ಸಜ್ಜು. ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುವಾಗ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಸ್ನೇಹಿತರೊಂದಿಗೆ ಕುಡಿಣಿದು ಕುಪ್ಪಳಿಸಿದ ಪಿಎಂ ಮರಿನ್:ವೈರಲ್ ವಿಡಿಯೋದಲ್ಲಿ ಫಿನ್‌ಲ್ಯಾಂಡ್‌ನ ಪ್ರಧಾನಿ ಕುಣಿದು ಕುಪ್ಪಳಿಸಿದ್ದಾರೆ. ಪಿಎಂ ಮರಿನ್ ಜೊತೆ ಕನಿಷ್ಠ ಆರು ಜನರು ಹಾಡುವುದು, ಡ್ಯಾನ್ಸ್ ಮಾಡುವುದು ಕಾಣಬಹುದಾಗಿದೆ. ಫಿನ್‌ಲ್ಯಾಂಡ್ ಪಿಎಂ ಮರಿನ್ ಡ್ಯಾನ್ಸ್ ಫ್ಲೋರ್‌ನಲ್ಲಿ ತನ್ನ ತೋಳುಗಳನ್ನು ಹಿಡಿದು ನೃತ್ಯ ಮಾಡುತ್ತಿದ್ದಾರೆ.
ಡ್ರಗ್ಸ್ ಸೇವನೆ ಆರೋಪದ ಬಗ್ಗೆ ಮಾತನಾಡಿದ ಪಿಎಂ ಮರಿನ್, ಒಂದು ದಿನ ಸಂಜೆ ಖಾಸಗಿ ಪಾರ್ಟಿಯಲ್ಲಿ ನಾನು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿರುವಾಗ ಡ್ಯಾನ್ಸ್, ಸಾಂಗ್ ಸೇರಿದಂತೆ ಮಜಾ ಮಾಡಿದ್ದೇವೆ. ಈ ವೇಳೆ ಮದ್ಯ ಸೇವನೆ ಸಹ ಮಾಡಲಾಗಿದೆ. ಆದ್ರೆ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡ್ರಗ್ಸ್ ಪರೀಕ್ಷೆಗೆ ಪಿಎಂ ಮರಿನ್ ಸಜ್ಜು: ಮರಿನ್ ಅವರ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಮಿತ್ರ ಮತ್ತು ಸೆಂಟರ್ ಪಾರ್ಟಿ ಎಂಪಿ ಮಿಕ್ಕೊ ಕರ್ನ್ ಅವರು ಪ್ರಧಾನಿ ಸ್ವಯಂಪ್ರೇರಣೆಯಿಂದ ಡ್ರಗ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದರು. ಬಂದಿರುವ ಮಾಹಿತಿ ಪ್ರಕಾರ ಪಿಎಂ ಮರಿನ್ ಕೂಡ ಈ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದಾರೆ. ವರದಿಗಳ ಪ್ರಕಾರ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ (SDP) ಸಂಸದ ಇಲ್ಮರಿ ನೂರ್ಮಿನೆನ್ ಮತ್ತು ಫಿನ್ನಿಷ್ ಗಾಯಕಿ ಅಲ್ಮಾ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆದರೆ, ಈ ವಿಡಿಯೋ ಯಾವಾಗ ಎಂಬುದು ಸ್ಪಷ್ಟವಾಗಿಲ್ಲ.