ಪ್ಯಾರಿಸ್ (ಫ್ರಾನ್ಸ್): ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಪೂರೈಕೆಯಾಗುವ ಹಣಕಾಸಿನ ಮೇಲೆ ನಿಗಾವಹಿಸುವ ಅಂತರ್‌ಸರ್ಕಾರಗಳ ಕಾರ್ಯಪಡೆಯಾದ ಹಣಕಾಸು ಕ್ರಿಯಾ ಕಾರ್ಯಪಡೆ (Financial Action Task Force- FATF)ಯು ರಷ್ಯಾದ ಸದಸ್ಯತ್ವವನ್ನು ಅಮಾನತುಗೊಳಿಸಲು ನಿರ್ಧರಿಸಿದೆ. ಉಕ್ರೇನ್ ಮೇಲಿನ ಯುದ್ಧ ವಿಚಾರವಾಗಿ ಎಫ್‌ಎಟಿಎಫ್ ಈ ತೀರ್ಮಾನಕ್ಕೆ ಬಂದಿದೆ.
ಜಾಗತಿಕ ಹಣಕಾಸು ವ್ಯವಸ್ಥೆಯ ಭದ್ರತೆ, ಸುರಕ್ಷತೆ ಮತ್ತು ಸಮಗ್ರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ತನ್ನ ಮೂಲ ತತ್ವಗಳಿಗೆ ರಷ್ಯಾದ ಒಕ್ಕೂಟದ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ಎಫ್‌ಎಟಿಎಫ್ ಹೇಳಿದೆ. ರಷ್ಯಾದ ಒಕ್ಕೂಟವು ಉಕ್ರೇನ್ ಮೇಲಿನ ಅಕ್ರಮ, ಅಪ್ರಚೋದಿತ ಮತ್ತು ನ್ಯಾಯ ಸಮ್ಮತವಲ್ಲದ ಪೂರ್ಣ ಪ್ರಮಾಣದ ಮಿಲಿಟರಿ ಆಕ್ರಮಣದ ಒಂದು ವರ್ಷದ ನಂತರವೂ ಕೂಡ ಎಫ್‌ಎಟಿಎಫ್, ಉಕ್ರೇನ್ ಜನರ ಬಗ್ಗೆ ತನ್ನ ಆಳವಾದ ಸಹಾನುಭೂತಿ ಹೊಂದಿದೆ ಎಂದು ಪುನರುಚ್ಚರಿಸುತ್ತದೆ. ರಷ್ಯಾದ ಒಕ್ಕೂಟದ ನಡೆಯುತ್ತಿರುವ ಕ್ರೂರತೆಯಿಂದ ಉಂಟಾದ ಅಪಾರ ಜೀವಹಾನಿ ಹಾಗೂ ದುರುದ್ದೇಶಪೂರಿತ ವಿನಾಶವನ್ನು ಖಂಡಿಸುವುದಾಗಿ ತಿಳಿಸಿದೆ.
ಇದನ್ನೂ ಓದಿ:ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು: ಕಾಶ್ಮೀರಿ ನಾಯಕತ್ವ, ಪ್ರತ್ಯೇಕತಾವಾದಿಗಳ ಮೇಲೇನು ಪರಿಣಾಮ?