ಇಸ್ಲಾಮಾಬಾದ್ : ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 3 ಬಿಲಿಯನ್ ಡಾಲರ್ ಬೇಲ್ ಔಟ್ ಪ್ಯಾಕೇಜ್ ಪಡೆಯುವಲ್ಲಿ ಪಾಕಿಸ್ತಾನ ಕೊನೆಗೂ ಸಫಲವಾಗಿದೆ. ತನ್ನ ಕಾರ್ಯಕಾರಿ ಮಂಡಳಿಯು ಪಾಕಿಸ್ತಾನಕ್ಕೆ $3 ಬಿಲಿಯನ್ ಬೇಲ್ಔಟ್ ಪ್ಯಾಕೇಜ್ ಅನ್ನು ಅನುಮೋದಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಘೋಷಿಸಿದೆ. ತೀವ್ರ ನಗದು ಕೊರತೆಯಿಂದ ಕಂಗಾಲಾಗಿರುವ ಪಾಕಿಸ್ತಾನಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ 3 ಬಿಲಿಯನ್ ಪೈಕಿ 1.2 ಬಿಲಿಯನ್ ಡಾಲರ್ಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ಅದು ಹೇಳಿದೆ.
ದೇಶದ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ಜೂನ್ 29 ರಂದು ಐಎಂಎಫ್ ಮತ್ತು ಪಾಕಿಸ್ತಾನವು ಸ್ಟ್ಯಾಂಡ್‌ಬೈ ಅರೇಂಜ್‌ಮೆಂಟ್ ಒಪ್ಪಂದವನ್ನು ತಲುಪಿದ ಕೆಲ ವಾರಗಳ ನಂತರ ಬುಧವಾರ ಐಎಂಎಫ್ ಪ್ರಕಟಣೆ ಬಂದಿದೆ. “ಐಎಂಎಫ್‌ನ ಕಾರ್ಯನಿರ್ವಾಹಕ ಮಂಡಳಿಯು ಪಾಕಿಸ್ತಾನಕ್ಕೆ ಒಂಬತ್ತು ತಿಂಗಳ ಸ್ಟ್ಯಾಂಡ್-ಬೈ ಅರೇಂಜ್‌ಮೆಂಟ್ (ಎಸ್‌ಬಿಎ) ಮೇಲೆ ಅಧಿಕಾರಿಗಳ ಆರ್ಥಿಕ ಸ್ಥಿರೀಕರಣ ಕಾರ್ಯಕ್ರಮಕ್ಕಾಗಿ ಸುಮಾರು $3 ಬಿಲಿಯನ್ ಅಥವಾ ಕೋಟಾದ ಶೇಕಡಾ 111 ರಷ್ಟನ್ನು ನೀಡಲು ಅನುಮೋದಿಸಿದೆ ಎಂದು ಬುಧವಾರ ತಡರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ ಐಎಂಎಫ್ ತಿಳಿಸಿದೆ.
ಪಾಕಿಸ್ತಾನ ಎದುರಿಸುತ್ತಿರುವ ಕಠಿಣವಾದ ಬಾಹ್ಯ ಪರಿಸ್ಥಿತಿಗಳು, ವಿನಾಶಕಾರಿ ಪ್ರವಾಹಗಳು ಮತ್ತು ತಪ್ಪು ಹಣಕಾಸು ನೀತಿಗಳ ಕಾರಣದಿಂದ ದೊಡ್ಡ ಮಟ್ಟದ ಹಣಕಾಸು ಮತ್ತು ಬಾಹ್ಯ ಕೊರತೆಗಳು ಉಂಟಾಗಿವೆ. ಇದರಿಂದ ದೇಶದಲ್ಲಿ ಹಣದುಬ್ಬರ ಹೆಚ್ಚಾಗಿದೆ ಮತ್ತು ಹಣಕಾಸು ವರ್ಷ 2023ರ ವಿದೇಶಿ ಮೀಸಲು ಕರಗಿ ಹೋಗಿವೆ.