ನೆದರ್ಲ್ಯಾಂಡ್:ಎಫ್‌ಐಹೆಚ್ ಹಾಕಿ ಪ್ರೋ ಟೂರ್ನಿಯಲ್ಲಿ ಶನಿವಾರ ಆತಿಥೇಯ ನೆದರ್ಲ್ಯಾಂಡ್ಸ್ ವಿರುದ್ಧ 2-3 ಅಂತರದ ಸೋಲಿನ ನಂತರ, ಭಾನುವಾರ ಇಲ್ಲಿಯ ಐಂಡ್‌ಹೋವನ್‌ನಲ್ಲಿ ನಡೆದ ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ 2-1 ಗೆಲುವಿನೊಂದಿಗೆ ಭಾರತ ತನ್ನ ಎಫ್‌ಐಹೆಚ್ ಹಾಕಿ ಪ್ರೊ ಲೀಗ್ 2022-23 ಅಭಿಯಾನ ಕೊನೆಗೊಳಿಸಿತು.
ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಕಾಶದೀಪ್ ಸಿಂಗ್ (2ನೇ ನಿಮಿಷ) ಮತ್ತು ಸುಖಜೀತ್ ಸಿಂಗ್ (14) ಅವರ ಆರಂಭಿಕ ಗೋಲುಗಳು ಭಾರತದ ಗೆಲುವಿಗೆ ಸಹಾಯ ಮಾಡಿತು. ಮತ್ತೊಂದೆಡೆ ಅರ್ಜೆಂಟೀನಾದ ಪರ ಲುಕಾಸ್ ಟೋಸ್ಕಾನಿ (58) ಏಕೈಕ ಗೋಲು ಗಳಿಸಿದರು.
ಅನುಭವಿ ಸ್ಟ್ರೈಕರ್ ಆಕಾಶದೀಪ್ ಸಿಂಗ್ ಆಟ ಪ್ರಾರಂಭವಾದ ಎರಡು ನಿಮಿಷಗಳಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಭಾರತದ ಆರಂಭಿಕ 1-0 ಮುನ್ನಡೆಯಿಂದ ವಿಚಲಿತರಾಗದ ಅರ್ಜೆಂಟೀನಾ 4ನೇ ನಿಮಿಷದಲ್ಲಿ ಮಾರಕ ಪ್ರತಿದಾಳಿ ನಡೆಸಿ ಗೋಲು ಗಳಿಸಲು ಪ್ರಯತ್ನಿಸಿತಾದರೂ ಅದಕ್ಕೆ ಅವಕಾಶ ಮಾಡಿಕೊಡದ ಭಾರತ ಗೋಲ್ಗಳನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಬಳಿಕ ಮುಂದಿನ ಕೆಲ ನಿಮಿಷಗಳ ಕಾಲ ಭಾರತ ಆತಿಥೇಯರ ವಿರುದ್ಧ ಪ್ರತಿದಾಳಿ ಆರಂಭಿಸಿತು.
2ನೇ ಗೋಲು: 14 ನೇ ನಿಮಿಷದಲ್ಲಿ ಆಕಾಶದೀಪ್ ಅವರು ವಿವೇಕ್ ಸಾಗರ್ ಪ್ರಸಾದ್ ಅವರಿಗೆ ಉತ್ತಮ ಬ್ಯಾಕ್ ಪಾಸ್ ನೀಡಿದರು. ಈ ವೇಳೆ ವಿವೇಕ್, ಸುಖಜೀತ್ ಅವರಿಗೆ ಚೆಂಡನ್ನು ಪಾಸ್ ಮಾಡಿದ್ದು, ಸುಖಜೀತ್ ಸುಲಭವಾಗಿ ಗೋಲು ಗಳಿಸುವ ಮೂಲಕ ಭಾರತಕ್ಕೆ 2ನೇ ಗೋಲು ಒದಗಿಸಿಕೊಟ್ಟರು.