ಬೆಂಗಳೂರು: ಅಜರ್ಬೈಜಾನ್ನಲ್ಲಿ ತಮ್ಮ ವಿರುದ್ಧ ಸಾಮೂಹಿಕ ಜನಾಂಗೀಯ ಹತ್ಯೆ ನಡೆಯಬಹುದು ಎಂಬ ಭೀತಿಯಿಂದ ಅಜರ್ಬೈಜಾನ್ನ ನಾಗೋರ್ನೊ-ಕರಾಬಾಖ್ ಪ್ರದೇಶದಲ್ಲಿ ವಾಸಿಸುತ್ತಿರುವ 1 ಲಕ್ಷ 20 ಸಾವಿರದಷ್ಟು ಅರ್ಮೇನಿಯನ್ನರು ಅರ್ಮೇನಿಯಾಗೆ ವಲಸೆ ಹೋಗಲು ತೀರ್ಮಾನಿಸಿದ್ದಾರೆ ಎಂದು ಸಮುದಾಯದ ಸ್ಥಳೀಯ ನಾಯಕರು ಹೇಳಿದ್ದಾರೆ.
ಕಳೆದ ವಾರ ನಡೆದ ಸಂಘರ್ಷದಲ್ಲಿ ಅಜರ್ಬೈಜಾನ್ ಎದುರು ಅರ್ಮೇನಿಯಾ ಸೋತಿದೆ. ಇದರ ನಂತರ ಕರಾಬಾಖ್ ಅರ್ಮೇನಿಯನ್ನರು ಈ ಪ್ರದೇಶವನ್ನು ತೊರೆಯುವ ಸಾಧ್ಯತೆಯಿದೆ ಮತ್ತು ಅರ್ಮೇನಿಯಾ ಅವರನ್ನು ದೇಶದೊಳಗೆ ಬಿಟ್ಟುಕೊಳ್ಳಲು ಸಿದ್ಧವಾಗಿದೆ ಎಂದು ಅರ್ಮೇನಿಯಾದ ಪ್ರಧಾನಿ ಹೇಳಿದ್ದಾರೆ. ಸೋವಿಯೆತ್ ಒಕ್ಕೂಟದ ಪತನದ ಕಾಲದಿಂದಲೂ ಎರಡೂ ದೇಶಗಳ ಮಧ್ಯದ ಸಂಘರ್ಷ ನಡೆದುಕೊಂಡು ಬಂದಿರುವುದು ಗಮನಾರ್ಹ.
ಅಂತಾರಾಷ್ಟ್ರೀಯವಾಗಿ ಅಜರ್ಬೈಜಾನ್ನ ಭಾಗವೆಂದು ಗುರುತಿಸಲ್ಪಟ್ಟ ಆದರೆ ಈ ಹಿಂದೆ ಬಾಕುವಿನ ನಿಯಂತ್ರಣವನ್ನು ಮೀರಿದ ಪ್ರದೇಶವಾದ ಕರಾಬಾಖ್ನ ಅರ್ಮೇನಿಯನ್ನರು ಸೆಪ್ಟೆಂಬರ್ 20 ರಂದು ನಡೆದ ಸಂಘರ್ಷದ ನಂತರ ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕಾಯಿತು. ಅರ್ಮೇನಿಯಾಗೆ ಹೋಲಿಸಿದರೆ ಬಹಳ ದೊಡ್ಡ ಪ್ರಮಾಣದ ಮಿಲಿಟರಿ ಬಲ ಹೊಂದಿರುವ ಅಜರ್ಬೈಜಾನ್ ಸೆಪ್ಟೆಂಬರ್ 20 ರಂದು 24 ಗಂಟೆಗಳ ಮಿಂಚಿನ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಇದರಲ್ಲಿ ಅರ್ಮೇನಿಯಾ ಪಡೆಗಳಿಗೆ ಸೋಲಾಗಿದೆ.
ನಾಗೋರ್ನೊ-ಕರಾಬಾಖ್ ಪ್ರದೇಶವನ್ನು ತನ್ನೊಂದಿಗೆ ಸೇರಿಸಿಕೊಳ್ಳುವುದಾಗಿ ಮತ್ತು ಅರ್ಮೇನಿಯನ್ನರ ನಾಗರಿಕ ಹಕ್ಕುಗಳನ್ನು ಕಾಪಾಡುವುದಾಗಿ ಅಜರ್ಬೈಜಾನ್ ಭರವಸೆ ನೀಡಿದೆ. ಆದರೆ ಭವಿಷ್ಯದಲ್ಲಿ ತಮ್ಮ ಮೇಲೆ ಜನಾಂಗೀಯ ಹಿಂಸಾಚಾರ ನಡೆಯಬಹುದು ಎಂಬ ಭೀತಿ ಆರ್ಮೇನಿಯನ್ನರದ್ದಾಗಿದೆ.
"ನಮ್ಮ ಜನತೆ ಅಜರ್ಬೈಜಾನ್ನ ಭಾಗವಾಗಿ ಬದುಕಲು ಬಯಸುವುದಿಲ್ಲ. ಬಹುತೇಕ ಅರ್ಮೇನಿಯನ್ನರು ತಾವು ವಾಸಿಸುತ್ತಿರುವ ಐತಿಹಾಸಿಕ ನೆಲವನ್ನು ತೊರೆಯಲು ಬಯಸುತ್ತಿದ್ದಾರೆ " ಎಂದು ಸ್ವಯಂ ಘೋಷಿತ ರಿಪಬ್ಲಿಕ್ ಆಫ್ ಆರ್ಟ್ಸಖ್ ಅಧ್ಯಕ್ಷ ಸಂವೇಲ್ ಶಹರಮಣನ್ ಅವರ ಸಲಹೆಗಾರ ಡೇವಿಡ್ ಬಬಯಾನ್ ಮಾಧ್ಯಮಗಳಿಗೆ ತಿಳಿಸಿದರು.
ಅಜರ್ಬೈಜಾನ್ ಮಿಲಿಟರಿ ಕಾರ್ಯಾಚರಣೆಯಿಂದ ನಿರಾಶ್ರಿತರಾದ ಮತ್ತು ಅಲ್ಲಿಂದ ಹೊರಹೋಗಲು ಬಯಸುವ ಎಲ್ಲರನ್ನೂ ರಷ್ಯಾದ ಶಾಂತಿಪಾಲನಾ ಪಡೆಗಳು ಅರ್ಮೇನಿಯಾಕ್ಕೆ ಕರೆದೊಯ್ಯುತ್ತವೆ ಎಂದು ಕರಾಬಾಖ್ನ ಅರ್ಮೇನಿಯನ್ ನಾಯಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪ್ರದೇಶವನ್ನು ಅರ್ಮೇನಿಯಾಕ್ಕೆ ಸಂಪರ್ಕಿಸುವ ಲಾಚಿನ್ ಕಾರಿಡಾರ್ ಮೂಲಕ ಅರ್ಮೇನಿಯನ್ನರು ಯಾವಾಗ ಹೊರಬರುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಬಾಬಯಾನ್ ಹೇಳಿದರು. ಸದ್ಯ ಕರಾಬಾಖ್ ಅನ್ನು ಉಳಿಸಿಕೊಳ್ಳಲು ವಿಫಲವಾದ ಕಾರಣ ಪ್ರಧಾನಿ ನಿಕೋಲ್ ಪಶಿನ್ಯಾನ್ ರಾಜೀನಾಮೆ ನೀಡಬೇಕೆಂಬ ಕೂಗು ವ್ಯಾಪಕವಾಗುತ್ತಿದೆ.
ಆರ್ಟ್ಸಖ್ ಎಂದೂ ಕರೆಯಲ್ಪಡುವ ನಾಗೋರ್ನೊ-ಕರಾಬಾಖ್ ಇದು ದಕ್ಷಿಣದ ಪರ್ವತಗಳಲ್ಲಿನ ಗುಡ್ಡಗಾಡು ಪ್ರದೇಶವಾಗಿದೆ. ಇದು ಅಂತಾರಾಷ್ಟ್ರೀಯವಾಗಿ ಅಜರ್ಬೈಜಾನ್ನ ಭಾಗವೆಂದು ಗುರುತಿಸಲ್ಪಟ್ಟಿದೆ. ಆದರೆ ಅರ್ಮೇನಿಯನ್ರು ಇಲ್ಲಿ ಬಹುಸಂಖ್ಯಾತರಾಗಿದ್ದಾರೆ. ಈ ಪ್ರದೇಶವು ತನ್ನದೇ ಆದ ಸರ್ಕಾರವನ್ನು ಹೊಂದಿದೆ. ಇದು ಅರ್ಮೇನಿಯಾದೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ ವಿಶ್ವಸಂಸ್ಥೆ ಅಥವಾ ಇತರ ಯಾವುದೇ ದೇಶದಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲ. ಕ್ರಿಶ್ಚಿಯನ್ ಆಗಿರುವ ಅರ್ಮೇನಿಯನ್ನರು ಮತ್ತು ಹೆಚ್ಚಾಗಿ ಟರ್ಕಿ ಮುಸ್ಲಿಮರಾದ ಅಜರ್ಬೈಜಾನಿಗಳ ಮಧ್ಯೆ ಇಲ್ಲಿ ಸಂಘರ್ಷ ನಡೆಯುತ್ತಿದೆ.
ಇದನ್ನೂ ಓದಿ :ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಅಮೆರಿಕದ ನ್ಯೂಜೆರ್ಸಿಯಲ್ಲಿ ಅ.8 ರಂದು ಲೋಕಾರ್ಪಣೆ