ಸಿಂಗಾಪುರ: ಸೋಮವಾರ ಕ್ರೂಸ್ ಹಡಗಿನಿಂದ ಸಿಂಗಾಪುರ ಜಲಸಂಧಿಗೆ ಬಿದ್ದ ಭಾರತೀಯ ಮಹಿಳೆ(64) ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸ್ಪೆಕ್ಟ್ರಮ್ ಆಫ್ ದಿ ಸೀಸ್, ಐಷಾರಾಮಿ ಕ್ರೂಸ್ ಹಡಗಿನ ಕ್ಲೋಸ್ಡ್ - ಸರ್ಕ್ಯೂಟ್ ದೂರದರ್ಶನದ ವಿಡಿಯೋ ಕ್ಲಿಪ್ ನೋಡಿದ ನಂತರ ಮಹಿಳೆಯ ಪುತ್ರ ವಿವೇಕ್ ಸಹಾನಿ ಅವರು 'ದುರದೃಷ್ಟವಶಾತ್, ನನ್ನ ತಾಯಿ ನಿಧನರಾಗಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ ಎಂದು ಮಂಗಳವಾರ ಖಚಿತ ಪಡಿಸಿದರು. ಐಷಾರಾಮಿ ಕ್ರೂಸ್ ನೌಕೆಯಲ್ಲಿ ಅವರ ತಾಯಿ ರೀತಾ ಸಹಾನಿ ಮತ್ತು ತಂದೆ ಜಾಕೇಶ್ ಸಹಾನಿ ತೆರಳುತ್ತಿದ್ದರು. ತಾಯಿಗೆ ಈಜು ಬರುತ್ತಿರಲಿಲ್ಲ ಎಂದು ಮೃತ ಮಹಿಳೆ ಮತ್ತೊಬ್ಬ ಮಗ ಅಪೂರ್ವ್ ಸಹಾನಿ ಸೋಮವಾರ ಹೇಳಿದ್ದರು. ಮೃತ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ತಮಗೆ ಸಹಾಯ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಪಿಎಂಒ ಮತ್ತು ಸಿಂಗಾಪುರದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಎಂದು ಅಪೂರ್ವ್ ಟ್ವೀಟ್ ಮಾಡಿದ್ದಾರೆ.
ಘಟನೆಯ ಬಗ್ಗೆ ತಿಳಿಸಿದಾಗಿನಿಂದ ಮಹಿಳೆಯ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಎಂದು ಸಿಂಗಾಪುರದಲ್ಲಿರುವ ಭಾರತದ ಹೈಕಮಿಷನ್ ಮಂಗಳವಾರ ತಿಳಿಸಿದೆ. 'ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ನಾವು ಸಿಂಗಾಪುರದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಮತ್ತು ಕಾನೂನು ಕಾರ್ಯ ವಿಧಾನಗಳನ್ನು ಸುಗಮಗೊಳಿಸುತ್ತಿದ್ದೇವೆ' ಎಂದು ಹೈ ಕಮಿಷನ್ ಮಂಗಳವಾರ ರಾತ್ರಿ ತಿಳಿಸಿತ್ತು.