ಫ್ಲೋರಿಡಾ(ಅಮೆರಿಕ):ಚಂದ್ರ ಮತ್ತು ಮಂಗಳ ಗ್ರಹಕ್ಕೆ ಗಗನಯಾನಿಗಳನ್ನು ಕರೆದೊಯ್ಯುವ ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಗಗನಯಾನ ನೌಕೆ ಉಡಾವಣೆಗೆ ಅಮೆರಿಕ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅನುಮತಿ ನೀಡಿದೆ. ಇದರಿಂದ ನೌಕೆ ಮುಂದಿನ ವಾರ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಲಿದೆ.
ಸ್ಟಾರ್‌ಶಿಪ್ ನೌಕೆ ಹಾರಾಟಕ್ಕೆ ಇದ್ದ ತಾಂತ್ರಿಕ ಅಡಚಣೆಗಳು ನಿವಾರಣೆಯಾಗಿದ್ದು, ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ನಿಂದ ಶುಕ್ರವಾರ ಬಹುನಿರೀಕ್ಷಿತ ಪರವಾನಗಿ ನೀಡಿದೆ. ವಿಶ್ವದ ಅತಿ ದೊಡ್ಡ ಮತ್ತು ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ ಸೋಮವಾರ ಹಾರಾಟ ನಡೆಸಲಿದೆ ಎಂದು ಸ್ಪೇಸ್‌ಎಕ್ಸ್ ಸಂಸ್ಥೆ ಹೇಳಿದೆ.
394 ಅಡಿ ಎತ್ತರದ ರಾಕೆಟ್ ಅನ್ನು ಮೊದಲ ಹಂತದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು. ಇದರಲ್ಲಿ ಯಾವುದೇ ಜನರು ಅಥವಾ ಉಪಗ್ರಹಗಳು ಇರುವುದಿಲ್ಲ. ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆಯನ್ನು ಟೆಕ್ಸಾಸ್‌ನ ದಕ್ಷಿಣ ತುದಿಯಿಂದ ಹವಾಯಿಯವರೆಗೆ ಹಾರಾಟ ನಡೆಸಿಸ, ಗಲ್ಫ್ ಆಫ್ ಮೆಕ್ಸಿಕೊ ಮಾರ್ಗವಾಗಿ ಪೆಸಿಫಿಕ್ ಸಾಗರದಲ್ಲಿ ಅದನ್ನು ಬೀಳಿಸಲಾಗುವುದು. ಈ ಚೊಚ್ಚಲ ಪ್ರಯತ್ನದಲ್ಲಿ ಅದನ್ನು ಮರಳಿ ಭೂಮಿಯ ಇಳಿಸುವ ಯಾವುದೇ ಪ್ರಯತ್ನ ಮಾಡಲಾಗುವುದಿಲ್ಲ ಎಂದು ಸ್ಪೇಸ್‌ಎಕ್ಸ್ ಸಂಸ್ಥೆ ತಿಳಿಸಿದೆ.
ಇದು ಪೂರ್ಣ ಗಾತ್ರದ ಸ್ಟಾರ್‌ಶಿಪ್‌ನ ಮೊದಲ ಉಡಾವಣಾ ಪ್ರಯತ್ನವಾಗಿದೆ. ಇದನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟಿದೆ. ಮೀಥೇನ್ ಇಂಧನದ ಸಹಾಯದಿಂದ ಇದರ ಎಂಜಿನ್‌ಗಳು ಚಾಲನೆಯಾಗಲಿವೆ. ಸುರಕ್ಷತೆ ಮತ್ತು ಪರಿಸರದ ದೃಷ್ಟಿಯಿಂದ ಎಲ್ಲ ಅವಶ್ಯಕ ಕ್ರಮಗಳನ್ನು ಸ್ಪೇಸ್‌ಎಕ್ಸ್ ಕೈಗೊಂಡಿದೆ ಎಂದು ಎಫ್ಎಎ ತಿಳಿಸಿದೆ. ಪರವಾನಗಿ ಐದು ವರ್ಷಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಯೋಜನೆಯನ್ನು ಪ್ರತಿಯೊಂದು ಹಂತದಲ್ಲೂ ಸಾರ್ವಜನಿಕ ಹಿತದೃಷ್ಟಿಯಿಂದ ನಿಗಾ ವಹಿಸಲಾಗಿದೆ. ಅಪಾಯಗಳನ್ನು ತಗ್ಗಿಸಲು ಸ್ಪೇಸ್‌ಎಕ್ಸ್ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಫ್ಎಎ ಸಲಹೆ ನೀಡಿದೆ.