ಟೋಕಿಯೊ (ಜಪಾನ್): ಜುಲೈನಲ್ಲಿ ಹತ್ಯೆಗೀಡಾದ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಸರ್ಕಾರಿ ಅಂತ್ಯಕ್ರಿಯೆಯು ಜಪಾನ್ನಲ್ಲಿ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ದಿಟ್ಟ ವ್ಯಕ್ತಿತ್ವದ ಅಬೆ, ಯುದ್ಧನಂತರ ದೇಶ ಕಂಡ ರಾಷ್ಟ್ರದ ಅತ್ಯಂತ ವಿಭಜಿತ ಗುಣದ ನಾಯಕರಲ್ಲೊಬ್ಬರಾಗಿದ್ದರು. ಆದರೆ ಈಗ ಆಡಳಿತ ಪಕ್ಷವು ಅಲ್ಟ್ರಾ-ಕನ್ಸರ್ವೇಟಿವ್ ಯೂನಿಫಿಕೇಶನ್ ಚರ್ಚ್‌ನೊಂದಿಗೆ ಹೊಂದಿರುವ ಸ್ನೇಹಶೀಲ ಸಂಬಂಧದ ಕಾರಣದಿಂದ ಅಬೆ ಅವರ ಅಂತ್ಯಕ್ರಿಯೆಗೆ ಹೆಚ್ಚಿನ ವಿರೋಧ ವ್ಯಕ್ತವಾಗುತ್ತಿದೆ.
ತನ್ನ ಪಕ್ಷದ ಜನಪ್ರತಿನಿಧಿಗಳು ಚರ್ಚ್‌ನೊಂದಿಗೆ ಹೊಂದಿರುವ ಸಂಬಂಧ ಮತ್ತು ಅಬೆ ಅವರ ಸರ್ಕಾರಿ ಅಂತ್ಯಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಪ್ರಧಾನಿ ಫುಮಿಯೊ ಕಿಶಿಡಾ ಅವರು ಎರಡು ರೀತಿಯಿಂದ ರಾಜಕೀಯ ಸಂದಿಗ್ಧದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅಬೆ ಅವರ ಸರ್ಕಾರಿ ಅಂತ್ಯಕ್ರಿಯೆಗೆ ಎದ್ದಿರುವ ಅಪಸ್ವರಗಳಿಗೆ ಕೆಲ ಕಾರಣಗಳು ಇಲ್ಲಿವೆ.
ಜಪಾನ್ನಲ್ಲಿ ಯಾರಿಗೆಲ್ಲ ಸರ್ಕಾರಿ ಅಂತ್ಯಕ್ರಿಯೆ ಮಾಡಲಾಗುತ್ತದೆ?: ದೇಶಕ್ಕೆ ಅಪ್ರತಿಮ ಕೊಡುಗೆ ನೀಡುವವರಿಗೆ ಚಕ್ರವರ್ತಿಯು ನೀಡುವ ಸನ್ಮಾನದ ಪರಂಪರೆಯಲ್ಲಿ ಇದರ ಬೇರುಗಳು ಅಡಗಿವೆ. ಎರಡನೇ ಮಹಾಯುದ್ಧಕ್ಕೆ ಮೊದಲು ಚಕ್ರವರ್ತಿಯನ್ನು ದೇವರೆಂದು ಪರಿಗಣಿಸಲಾಗುತ್ತಿತ್ತು ಮತ್ತು ಸರ್ಕಾರಿ ಅಂತ್ಯಕ್ರಿಯೆಯ ಗೌರವ ಪಡೆದವರಿಗಾಗಿ ಸಾರ್ವಜನಿಕ ಶೋಕಾಚರಣೆ ಕಡ್ಡಾಯವಾಗಿತ್ತು. ಸರ್ಕಾರಿ ಅಂತ್ಯಕ್ರಿಯೆಗಳು ಬಹುತೇಕ ರಾಜಮನೆತನದವರಿಗೆ ಸೀಮಿತವಾಗಿದ್ದವು. ಆದಾಗ್ಯೂ ರಾಜಕೀಯ ಮತ್ತು ಮಿಲಿಟರಿ ನಾಯಕರಿಗೂ ಸರ್ಕಾರಿ ಅಂತ್ಯಕ್ರಿಯೆಯ ಗೌರವ ನೀಡಲಾಗಿತ್ತು. ಜಪಾನ್‌ನ ಪರ್ಲ್ ಹಾರ್ಬರ್ ದಾಳಿಯ ನೇತೃತ್ವ ವಹಿಸಿ 1943ರಲ್ಲಿ ನಿಧನರಾದ ಇಸೋರೊಕು ಯಮಾಮೊಟೊ ಅವರಿಗೆ ಸರ್ಕಾರಿ ಅಂತ್ಯಕ್ರಿಯೆಯ ಗೌರವ ನೀಡಲಾಗಿತ್ತು.
ಕಾನೂನಿನ ಆಧಾರವಿಲ್ಲ: ಯುದ್ಧದ ನಂತರ ಸರ್ಕಾರಿ ಅಂತ್ಯಕ್ರಿಯೆಯ ಕಾನೂನನ್ನು ರದ್ದುಗೊಳಿಸಲಾಯಿತು. ಜಪಾನ್‌ನ ಯುಎಸ್ ಆಕ್ರಮಣವನ್ನು ಕೊನೆಗೊಳಿಸುವ ಮತ್ತು ಮಿತ್ರರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಮರುಸ್ಥಾಪಿಸುವ ಸ್ಯಾನ್ ಫ್ರಾನ್ಸಿಸ್ಕೊ ಒಪ್ಪಂದಕ್ಕೆ ಸಹಿ ಹಾಕಿದ ರಾಜಕೀಯ ನಾಯಕ ಶಿಗೆರು ಯೋಶಿದಾಗೆ 1967 ರಲ್ಲಿ ಜಪಾನ್‌ನ ಸರ್ಕಾರಿ ಅಂತ್ಯಕ್ರಿಯೆ ನಡೆಯಿತು. ಯೋಶಿದಾ ಅಂತ್ಯಕ್ರಿಯೆಯನ್ನು ಯಾವುದೇ ಕಾನೂನಿನ ಆಧಾರವಿಲ್ಲದೆ ನಡೆಸಲಾಯಿತು ಎಂಬ ಟೀಕೆಯಿಂದಾಗಿ, ನಂತರದ ಸರ್ಕಾರಗಳು ಅಂಥ ಸಂಪ್ರದಾಯಗಳನ್ನು ಕಡಿಮೆಗೊಳಿಸಿದವು. ಸರ್ಕಾರಿ ಅಂತ್ಯಕ್ರಿಯೆಯು ಪ್ರಜಾಪ್ರಭುತ್ವದ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಚುವೊ ವಿಶ್ವವಿದ್ಯಾಲಯದ ಇತಿಹಾಸಕಾರ ಜುನಿಚಿ ಮಿಯಾಮಾ ಹೇಳಿದ್ದಾರೆ.
ಶಿಂಜೊ ಅಬೆ ಅವರಿಗೆ ಸರ್ಕಾರಿ ಅಂತ್ಯಕ್ರಿಯೆ ಏಕೆ?:ಜಪಾನ್‌ನ ಆಧುನಿಕ ರಾಜಕೀಯ ಇತಿಹಾಸದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನಾಯಕ ಮತ್ತು ಜಪಾನ್‌ನ ಅಂತರರಾಷ್ಟ್ರೀಯ ಪ್ರೊಫೈಲ್ ಅನ್ನು ಹೆಚ್ಚಿಸಿದ ಅವರ ರಾಜತಾಂತ್ರಿಕ, ಭದ್ರತೆ ಮತ್ತು ಆರ್ಥಿಕ ನೀತಿಗಳಿಗಾಗಿ ಅಬೆ ಅವರು ಸರ್ಕಾರಿ ಅಂತ್ಯಕ್ರಿಯೆಗೆ ಅರ್ಹರು ಎಂದು ಕಿಶಿಡಾ ಹೇಳುತ್ತಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಬೆಯ ಹತ್ಯೆಯನ್ನು ಗಮನಿಸಿದ ಕಿಶಿದಾ, ಪ್ರಜಾಪ್ರಭುತ್ವದ ವಿರುದ್ಧ ಹಿಂಸೆಗೆ ಎಂದಿಗೂ ತಲೆಬಾಗದ ತನ್ನ ದೃಢಸಂಕಲ್ಪವನ್ನು ಜಪಾನ್ ತೋರಿಸಬೇಕು ಎಂದು ಹೇಳುತ್ತಾರೆ.