ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಅರಾಜಕತೆ ಉಂಟಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ಕೆಲ ದಿನಗಳ ಹಿಂದೆ ಇಮ್ರಾನ್ ಖಾನ್ ಅವರನ್ನ ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಳಿಸಿ, ಶೆಹಬಾಜ್ ಷರೀಫ್ ಆ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇದರ ಮಧ್ಯೆ, ಜನಸಾಮಾನ್ಯರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಪಾಕ್ ಮಾಜಿ ಕ್ರಿಕೆಟರ್ ಟ್ವೀಟ್ ಮಾಡಿದ್ದಾರೆ.
ಮೂರು ಮಾದರಿ ಕ್ರಿಕೆಟ್ನಲ್ಲಿ ಪಾಕ್ ತಂಡ ಪ್ರತಿನಿಧಿಸಿರುವ ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿದ್ದು, ಲಾಹೋರ್‌ನ ಯಾವುದೇ ಪೆಟ್ರೋಲ್ ಪಂಪ್ನಲ್ಲಿ ತೈಲ ಇಲ್ಲ, ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದು, ಪ್ರಮುಖ ರಾಜಕಾರಣಿಗಳಿಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾಕ್ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಗುಡ್ ಬೈ
ಹಫೀಜ್ ಮಾಡಿರುವ ಟ್ವೀಟ್: ಲಾಹೋರ್‌ನ ಯಾವುದೇ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಗೂ ಎಟಿಎಂಗಳಲ್ಲಿ ನಗದು ಲಭ್ಯ ಇಲ್ಲವೇ? ಜನಸಾಮಾನ್ಯರು ರಾಜಕೀಯ ನಿರ್ಧಾರಗಳಿಂದ ಬಳಲುತ್ತಿರುವುದು ಯಾಕೆ? ಎಂದು ತಿಳಿಸಿದ್ದಾರೆ. ಈ ಟ್ವೀಟ್ ಅನ್ನು ಮಾಜಿ ಪ್ರಧಾನಿ ಇಮ್ರಾನ್ ಖಾನ್, ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಟ್ಯಾಗ್ ಮಾಡಿದ್ದಾರೆ.
ಇಮ್ರಾನ್ ಖಾನ್ ಅವರನ್ನ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ಬಳಿಕ ಶೆಹಬಾಜ್ ಷರೀಫ್ ಕಳೆದ ಏಪ್ರಿಲ್ ತಿಂಗಳಲ್ಲಿ ಪಾಕ್ನ 23ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪಾಕ್ ತಂಡದ ಪರ ಮೂರು ಮಾದರಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಹಫೀಜ್ 12,000ಕ್ಕೂ ಹೆಚ್ಚು ರನ್ಗಳಿಸಿದ್ದು, 250ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಹಫೀಜ್ 55 ಟೆಸ್ಟ್, 218 ಏಕದಿನ ಹಾಗೂ 119 ಟಿ - 20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.
ಪಾಕಿಸ್ತಾನದ ನಾಯಕನಾಗಿ ಸಹ ಅವರು ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದ್ದ ಮೊಹಮ್ಮದ್ ಹಫೀಜ್ 2022ರ ಜನವರಿ ತಿಂಗಳಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.