ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಶುಕ್ರವಾರ ಮಸೀದಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಖರಾನ್ ಪ್ರದೇಶದ ಮಸೀದಿಯ ಹೊರಗೆ ಮುಹಮ್ಮದ್ ನೂರ್ ಮೆಸ್ಕಂಜೈ ಮೇಲೆ ದಾಳಿಕೋರರು ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಖರಾನ್ ಪೊಲೀಸ್ ವರಿಷ್ಠಾಧಿಕಾರಿ ಆಸಿಫ್ ಹಲೀಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗಾಯಗೊಂಡಿದ್ದ ಮಾಜಿ ಮುಖ್ಯ ನ್ಯಾಯಮೂರ್ತಿಗಳನ್ನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾದರೂ ಅವರು ಬದುಕುಳಿಯಲಿಲ್ಲ. ನ್ಯಾಯಮೂರ್ತಿಗಳ ಸಾವಿಗೆ ತೀವ್ರ ಸಂತಾಪ ಸೂಚಿಸಿರುವ ಬಲೂಚಿಸ್ತಾನ್ ಮುಖ್ಯಮಂತ್ರಿ ಮೀರ್ ಅಬ್ದುಲ್ ಖುಡೂಸ್ ಬಿಜೆಂಜೊ, ಮಾಜಿ ನ್ಯಾಯಾಧೀಶರು ನಿರ್ಭೀತ ಜಸ್ಟೀಸ್ ಆಗಿದ್ದರು. ಅವರ ಸೇವೆ ಸ್ಮರಣೀಯ ಎಂದಿದ್ದಾರೆ. ರಿಬಾ ಮೂಲದ ಬ್ಯಾಂಕಿಂಗ್ ವ್ಯವಸ್ಥೆಯು ಶರಿಯಾಗೆ ವಿರುದ್ಧವಾಗಿದೆ ಎಂಬ ಮಹತ್ವದ ತೀರ್ಪು ನೀಡಿದ್ದಕ್ಕಾಗಿ ಮೆಸ್ಕಂಜೈ ಹೆಸರುವಾಸಿಯಾಗಿದ್ದರು.