ಬ್ರಸ್ಸೆಲ್ಸ್( ಬೆಲ್ಜಿಯಂ) : ಉಕ್ರೇನ್ ಮತ್ತು ಮೊಲ್ಡೊವಾ ಜೊತೆ ಯುರೋಪಿಯನ್ ಕೌನ್ಸಿಲ್ ಸದಸ್ಯತ್ವದ ಮಾತುಕತೆಗಳನ್ನು ಆರಂಭಿಸಿದೆ ಎಂದು ಯುರೋಪಿಯನ್ ಯೂನಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಗುರುವಾರ ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆಯನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ"ಉಕ್ರೇನ್ ವಿಜಯ" ಎಂದು ಕರೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಝೆಲೆನ್ಸ್ಕಿ, "ಉಕ್ರೇನ್ ಮತ್ತು ಮೊಲ್ಡೊವಾ ದೇಶಗಳಿಗೆ ಯುರೋಪಿಯನ್ ಯೂನಿಯನ್ ಗ್ರೀನ್‌ಲೈಟ್ಸ್ ಸದಸ್ಯತ್ವ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಇದು ಉಕ್ರೇನ್‌ಗೆ ವಿಜಯದ ಸಂಕೇತ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ದಣಿದಿಲ್ಲದವರು ಇತಿಹಾಸವನ್ನು ನಿರ್ಮಿಸುತ್ತಾರೆ" ಎಂದು ಅವರು ಬಣ್ಣಿಸಿದ್ದಾರೆ.
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಉಕ್ರೇನ್ ರಾಷ್ಟ್ರವು ಯುರೋಪಿಯನ್ ಒಕ್ಕೂಟಕ್ಕೆ ಸೇರುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ಬಣವು ಉಕ್ರೇನ್ ಅನ್ನು ಅಭ್ಯರ್ಥಿ ರಾಜ್ಯವಾಗಿ ಅಂಗೀಕರಿಸಿದ ಸುಮಾರು ಎರಡು ವರ್ಷಗಳ ನಂತರ ಯುರೋಪಿಯನ್ ಕೌನ್ಸಿಲ್ನಿಂದ ಈ ಘೋಷಣೆ ಹೊರ ಬಿದ್ದಿದೆ.
ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ನಡುವೆ ಗುರುವಾರದ ಈ ಪ್ರಕಟಣೆ ಹೊರ ಬಿದ್ದಿರುವುದು ಉಕ್ರೇನ್‌ಗೆ ಪ್ರಮುಖ ಹೆಜ್ಜೆಯಾಗಿದೆ. ಹಲವಾರು ಯುರೋಪಿಯನ್ ನಾಯಕರು ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಅಲ್ಬೇನಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಜಾರ್ಜಿಯಾ, ಮೊಲ್ಡೊವಾ, ಮಾಂಟೆನೆಗ್ರೊ, ಉತ್ತರ ಮ್ಯಾಸಿಡೋನಿಯಾ, ಸೆರ್ಬಿಯಾ ಮತ್ತು ಟರ್ಕಿ ಜೊತೆಗೆ ಪ್ರಸ್ತುತ ಯುರೋಪಿಯನ್ ಯೂನಿಯನ್ನ ಸದಸ್ಯತ್ವವನ್ನು ಬಯಸುತ್ತಿರುವ ಒಂಬತ್ತು ದೇಶಗಳಲ್ಲಿ ಉಕ್ರೇನ್ ಕೂಡಾ ಒಂದಾಗಿದೆ.