ಅಡಿಸ್ ಅಬಾಬಾ(ಇಥಿಯೋಪಿಯಾ): ಇಥಿಯೋಪಿಯಾದ ಫಿನೋಟ್ ಸೆಲಾಮ್ ಪ್ರದೇಶದಲ್ಲಿ ಸರ್ಕಾರಿ ಪಡೆಗಳು ಮತ್ತು ಸ್ಥಳೀಯ ಮಿಲಿಟಿಯಾ ಗುಂಪಿನ ನಡುವೆ ದೊಡ್ಡ ಪ್ರಮಾಣದಲ್ಲಿ ಕಾಳಗ ಸಂಭವಿಸಿದೆ. ಮಿಲಿಟಿಯಾ ಗುಂಪುನಿಂದ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಭಾನುವಾರ ನಡೆದ ಸ್ಫೋಟದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಫಿನೋಟ್ ಸೆಲಂ ಜನರಲ್ ಆಸ್ಪತ್ರೆಯ ಸಿಇಒ ಮನಯೆ ತೆನಾವ್ ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಹೇಳಿದೆ.
ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಮಾತ್ರ ಬಹಿರಂಗಗೊಂಡಿದೆ. ಇನ್ನು ಬಹಳಷ್ಟು ಜನ ಆಸ್ಪತ್ರೆಗೆ ದಾಖಲಾಗದೇ ಇರಬಹುದು. ಒಟ್ಟು ಸಾವುನೋವುಗಳ ಸಂಖ್ಯೆ ಇನ್ನೂ ಅಸ್ಪಷ್ಟವಾಗಿದೆ ಎಂದು ವರದಿಯಾಗಿದೆ. ಅಮ್ಹಾರಾ ಪ್ರದೇಶದಲ್ಲಿ ಸರ್ಕಾರಿ ಪಡೆಗಳು ಮತ್ತು ಫಾನೊ ಎಂದು ಕರೆಯಲ್ಪಡುವ ಸ್ಥಳೀಯ ಮಿಲಿಟಿಯ ನಡುವೆ ಭೀಕರ ಹೋರಾಟ ಪ್ರಾರಂಭವಾಗಿದೆ. ಈ ತಿಂಗಳ ಆರಂಭದಿಂದಲೇ ಅಲ್ಲಿನ ಸರ್ಕಾರಿ ಮತ್ತು ಬಂಡಾಯ ಗುಂಪುಗಳ ನಡುವೆ ಹೋರಾಟ ನಡೆಯುತ್ತಿದೆ. ಭಾರಿ ಸ್ಪೋಟಕ್ಕೂ ಮುನ್ನ ಸೇರಿದಂತೆ ಇದುವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ 160ಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗವು - EHRC ಆಗಸ್ಟ್ 3 ರಂದು ಉಂಟಾದ ಎರಡು ಗುಂಪುಗಳ ನಡುವಿನ ದೊಡ್ಡ ಪ್ರಮಾಣದ ವಿದ್ವಂಸಕ ಕೃತ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸತತವಾಗಿ ನಡೆಯುತ್ತಿರುವ ಘರ್ಷಣೆಗಳ ಹಿನ್ನೆಲೆಯಲ್ಲಿ ಇಥಿಯೋಪಿಯಾ ಸರ್ಕಾರ ಆಗಸ್ಟ್ 4 ರಂದು ಅಮ್ಹಾರಾ ಪ್ರದೇಶದಲ್ಲಿ ಆರು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದರ ವರದಿ ಹೇಳಿದೆ.
ಪ್ರಾದೇಶಿಕ ಪಡೆಗಳನ್ನು ವಿಸರ್ಜಿಸುವ ಫೆಡರಲ್ ಸರ್ಕಾರದ ಕ್ರಮ ವಿರೋಧಿಸಿದ ನಂತರವೇ ಸರ್ಕಾರಿ ಪಡೆಗಳು ಮತ್ತು ಫ್ಯಾನೊ ಮಿಲಿಟಿಯ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿವೆ. ಸರ್ಕಾರದ ಈ ಕ್ರಮದಿಂದ ಪ್ರಾದೇಶಿಕ ಭದ್ರತೆಗೆ ಧಕ್ಕೆ ಬರುತ್ತದೆ ಎಂದು ಅಂಹರಾ ರಾಷ್ಟ್ರೀಯವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಫೆಡರಲ್ ಸರ್ಕಾರದ ಕ್ರಮಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.