ವಾಷಿಂಗ್ಟನ್(ಅಮೆರಿಕ): ಕಾಶ್ಮೀರಿ ಜನರಿಗೆ ಮಾನವೀಯ ನೆರವಿನ ಅವಶ್ಯಕತೆಯಿದೆ. ಆದ್ರೆ ವಿಶ್ವಸಂಸ್ಥೆಗೆ ಅವರ ಪ್ರವೇಶವಿಲ್ಲ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಸಭೆಯಲ್ಲಿ ಪಾಕಿಸ್ತಾನ ಪ್ರತಿನಿಧಿ ಮುನೀರ್ ಅಕ್ರಮ್ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯ ಪ್ರತಿನಿಧಿ ನಿತೀಶ್ ಬಿರ್ಡಿ ಅವರು ಈ ಕುರಿತು ಪ್ರತಿಕ್ರಿಯಿಸಿ, ಕಾಶ್ಮೀರಿ ಜನರ ಬಗ್ಗೆ ಕಾಳಜಿ ತೋರಿಸುತ್ತಿರುವ ಪಾಕಿಸ್ತಾನವು ಮೊದಲು ಅಲ್ಲಿ ಭಯೋತ್ಪಾದನೆ ನಿಲ್ಲಿಸಬೇಕಿದೆ. ಇದರಿಂದ ಜಮ್ಮು ಕಾಶ್ಮೀರ ಜನರಿಗೆ ನಿಜವಾದ ಸಹಕಾರ ಸಿಗಲಿದೆ. ಪಾಕಿಸ್ತಾನವು ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಪಾಕಿಸ್ತಾನದ ಪ್ರತಿನಿಧಿಗಳು ಭಾರತದ ವಿರುದ್ಧ, ದುರುದ್ದೇಶಪೂರಿತ ಪ್ರಚಾರ ಮಾಡಲು ಮತ್ತು ಸುಳ್ಳು ಹೇಳಲು, ವಿಶ್ವಸಂಸ್ಥೆಯ ವೇದಿಕೆಗಳನ್ನು ಬಳಸಿಕೊಳ್ಳುವುದರ ಮೂಲಕ ನಿರಂತರವಾಗಿ ದುರುಪಯೋಗ ಪಡಿಸಿಕೊಳ್ಳುತಿದ್ದಾರೆ. ಅಲ್ಲದೇ ಕೆಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಭಾಗವಾಗಿದ್ದು, ಇದರಲ್ಲಿ ಪಾಕಿಸ್ತಾನ ಆಕ್ರಮಿತ ಪ್ರದೇಶಗಳು ಇವೆ. ಆದರೆ ಅವು ಯಾವತ್ತಿಗೂ ಭಾರತದ ಭಾಗಗಳಾಗಿಯೇ ಉಳಿಯಲಿವೆ. ಈ ಸತ್ಯವನ್ನು ಯಾವೊಂದು ದೇಶವು ನಿರಾಕರಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಿರುದ್ಧ ನಿತೀಶ್ ಬಿರ್ಡಿ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ:ಭುವನೇಶ್ವರದಿಂದ ದೆಹಲಿಗೆ ತೆರಳಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು: ಶುಕ್ರವಾರ ನಾಮಪತ್ರ ಸಲ್ಲಿಕೆ