ಸ್ಯಾನ್ ಫ್ರಾನ್ಸಿಸ್ಕೊ (ಯುಎಸ್ಎ):ಜನಪ್ರಿಯ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಸಿಇಒ ಆಗಿ ಹೊಸ ವ್ಯಕ್ತಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಂದಿನ ಆರು ವಾರಗಳಲ್ಲಿ ಮಹಿಳೆಯೊಬ್ಬರು ನೂತನ ಸಿಇಒ ಆಗಿ ಅಧಿಕಾರ ಸ್ವೀಕರಿಸುವರು ಎಂದು ಹಾಲಿ ಸಿಇಒ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.
ನೂತನ ಸಿಇಒ ಮಹಿಳೆ ಎಂಬುದನ್ನು ಬಿಟ್ಟರೆ, ಹೆಸರು ಮತ್ತು ಅವರು ಯಾರೆಂದು ಹೇಳದೆ ಗೌಪ್ಯವಾಗಿಟ್ಟಿದ್ದಾರೆ. ಸಿಇಒ ಹುದ್ದೆಯಿಂದ ಕೆಳಗಿಳಿದ ನಂತರ, ತಾವು ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ), ಉತ್ಪನ್ನ ಮತ್ತು ಸಾಫ್ಟ್‌ವೇರ್ ವಿಭಾಗಗಳ ಜವಾಬ್ದಾರಿ ನೋಡಿಕೊಳ್ಳುವುದಾಗಿ ಮಸ್ಕ್ ತಿಳಿಸಿದ್ದಾರೆ.
ಕಳೆದ ವರ್ಷ ಮಸ್ಕ್ $44 ಶತಕೋಟಿಗೆ ಟ್ವಿಟರ್ ಖರೀದಿಸಿದ್ದರು. ಹೀಗೆ ಖರೀದಿಸಿದ ಕೆಲವೇ ದಿನಗಳಲ್ಲಿ ಸಿಇಒ ಸ್ಥಾನ ಅಲಂಕರಿಸಿದ್ದರು. ಇದಕ್ಕೆ ಟ್ವಿಟರ್ ಪಾಲುದಾರರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆ ಬಳಿಕ ಖಾಯಂ ಸಿಇಒ ಅಲ್ಲ, ಯಾವುದೇ ಕಂಪನಿಗೆ ಸಿಇಒ ಆಗಲು ಬಯಸುವುದೂ ಇಲ್ಲ ಎಂದು ಮಸ್ಕ್ ಸ್ಪಷ್ಟನೆ ನೀಡಿದ್ದರು. "ನಾನು ಟ್ವಿಟರ್‌ನಲ್ಲಿ ನನ್ನ ಸಮಯವನ್ನು ಕಡಿಮೆ ಮಾಡುತ್ತೇನೆ. ಕಾಲಾನಂತರದಲ್ಲಿ ಟ್ವಿಟರ್ ನಡೆಸಲು ಬೇರೆಯವರನ್ನು ಹುಡುಕುತ್ತೇನೆ." ಎಂದು ಹೇಳಿದ್ದರು.
ಇದಾಗಿ ಒಂದು ತಿಂಗಳಲ್ಲಿ ಮತ್ತೆ ಟ್ವೀಟ್ ಮಾಡಿದ್ದ ಮಸ್ಕ್, "ಹೊಣೆ ನಿಭಾಯಿಸುವ ಸಮರ್ಥ ವ್ಯಕ್ತಿಯನ್ನು ಕಂಡುಕೊಂಡ ತಕ್ಷಣ ನಾನು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ." ಎಂದಿದ್ದರು. ಫೆಬ್ರವರಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಆಧಾರಿತ ಕಂಪನಿಗೆ ನೂತನ ಸಿಇಒ ಅನ್ನು ಬಹುಶಃ ಈ ವರ್ಷದ ಅಂತ್ಯದ ವೇಳೆಗೆ ಹುಡುಕುವ ನಿರೀಕ್ಷೆ ಇದೆ ಎಂದು ಮತ್ತೊಮ್ಮ ಹೇಳಿದ್ದರು. ಅದರಂತೆ ನಿನ್ನೆ ಮಾಹಿತಿ ನೀಡಿದ್ದಾರೆ.