ಪ್ರಮುಖ ಸಾಮಾಜಿಕ ಮಾಧ್ಯಮವಾದ ಟ್ವಿಟರ್ನಲ್ಲಿ ಕೆಲ ದಿನಗಳ ಹಿಂದಷ್ಟೇ ಹೂಡಿಕೆ ಮಾಡಿ ಷೇರುಗಳನ್ನು ಪಡೆದುಕೊಂಡಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಆ ಸಂಸ್ಥೆಯು ಆಡಳಿತ ಮಂಡಳಿ ಸದಸ್ಯತ್ವದ ಆಫರ್ ನೀಡಿತ್ತು. ಆದರೆ, ಎಲಾನ್ ಮಸ್ಕ್ ಮಂಡಳಿಯ ಸದಸ್ಯತ್ವ ಸ್ಥಾನವನ್ನು ತಿರಸ್ಕರಿಸಿದ್ದು, ಷೇರುದಾರರಾಗಿ ಮುಂದುವರಿಯಲು ಇಚ್ಚಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್, ಎಲಾನ್ ಮಸ್ಕ್ ಅವರು ಟ್ವಿಟರ್ ಆಡಳಿತ ಮಂಡಳಿಯ ಸದಸ್ಯತ್ವ ಸ್ಥಾನವನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಕಂಪನಿಗೆ ಮಾಹಿತಿ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಪೂರ್ವನಿರ್ಧರಿತ ಸಮಯದಂತೆ ಎಲಾನ್ ಮಸ್ಕ್ ಏಪ್ರಿಲ್ 9 ರಂದೇ ಟ್ವಿಟರ್ ಆಡಳಿತ ಮಂಡಳಿಯ ಸದಸ್ಯತ್ವ ಸ್ಥಾನವನ್ನು ಅಲಂಕರಿಸಬೇಕಿತ್ತು. ಆದರೆ, ಅವರು ಇಂದು ಬೆಳಗ್ಗೆ ನನ್ನ ಜೊತೆ ಚರ್ಚಿಸಿ ಸದಸ್ಯತ್ವ ಸ್ಥಾನವನ್ನು ನಿರಾಕರಿಸಿದ್ದಾರೆ. ಇದನ್ನು ನಾನು ಕಂಪನಿಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದೇನೆ ಎಂದು ಅಗರ್ವಾಲ್ ಬರೆದುಕೊಂಡಿದ್ದಾರೆ.
ಎಲಾನ್ ಮಸ್ಕ್ ಟ್ವಿಟರ್ನಲ್ಲಿ ಹೂಡಿಕೆ ಮಾಡಿದಾಗ ಎಲ್ಲ ಷೇರುದಾರರಂತೆ ಅವರು ಕೂಡ ಸದಸ್ಯತ್ವ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೆವು. ಇದು ಕಂಪನಿಯ ಹಿತದೃಷ್ಟಿಯಿಂದ ಉತ್ತಮ ನಿರ್ಧಾರವವಾಗಿತ್ತು. ಹೀಗಾಗಿ ಅವರಿಗೆ ಸದಸ್ಯತ್ವ ಸ್ಥಾನದ ಆಫರ್ ನೀಡಲಾಗಿತ್ತು. ಆದರೆ, ಅವರೇ ಈ ಗೌರವವನ್ನು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಎಲಾನ್ ಮಸ್ಕ್ ಅವರು ಮಂಡಳಿಯ ಭಾಗವಾಗಿದ್ದರೂ, ಇಲ್ಲದಿದ್ದರೂ ಅವರ ಸಲಹೆಗಳನ್ನು ಸ್ವಾಗತಿಸುತ್ತೇವೆ. ಅವರು ನಮ್ಮ ಕಂಪನಿಯ ದೊಡ್ಡ ಷೇರುದಾರರಾಗಿದ್ದಾರೆ ಎಂದು ಅಗರ್ವಾಲ್ ಬರೆದುಕೊಂಡಿದ್ದಾರೆ. ನಿನ್ನೆಯಷ್ಟೇ ಎಲಾನ್ ಮಸ್ಕ್ ಟ್ವಿಟರ್ ಬಳಕೆದಾರರಲ್ಲಿ ಕಂಪನಿಯ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿದ್ದರು.
ಈ ವೇಳೆ 'ಟ್ವಿಟರ್ ಸಾಯುತ್ತಿದೆಯೇ' ಎಂದು ಪ್ರಶ್ನಿಸಿದ್ದರು. ಅಲ್ಲದೇ, ಖ್ಯಾತನಾಮರು ಟ್ವಿಟರ್ ಖಾತೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದು, ಇದಕ್ಕೆ ಕಂಪನಿಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನೂ ಎಲಾನ್ ಮಸ್ಕ್ ಹೇಳಿದರು.
ಓದಿ:ಸೆಕ್ಷನ್ 144 ಉಲ್ಲಂಘನೆ ಪ್ರಕರಣ : ಕೋರ್ಟ್ಗೆ ಶರಣಾಗಿ ಜಾಮೀನು ಪಡೆದ ಕೇಂದ್ರ ಸಚಿವ