ವಾಶಿಂಗ್ಟನ್ ಡಿಸಿ (ಅಮೆರಿಕ) : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ರಿಪಬ್ಲಿಕನ್ ಪ್ರೈಮರೀಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಭಾರತೀಯ-ಅಮೆರಿಕನ್ ಜನಪ್ರತಿನಿಧಿ ವಿವೇಕ ರಾಮಸ್ವಾಮಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಭರವಸೆಯ ಅಭ್ಯರ್ಥಿಯಾಗಿದ್ದಾರೆ ಎಂದು ಎಲೋನ್ ಮಸ್ಕ್ ಶ್ಲಾಘಿಸಿದ್ದಾರೆ. ಜನಪ್ರಿಯ ಪತ್ರಕರ್ತ ಟಕರ್ ಕಾರ್ಲ್ಸನ್ ಅವರೊಂದಿಗಿನ ರಾಮಸ್ವಾಮಿ ಅವರ ಸಂದರ್ಶನವನ್ನು ಉಲ್ಲೇಖಿಸಿರುವ ಎಲೋನ್ ಮಸ್ಕ್, "ಅವರು ಬಹಳ ಭರವಸೆಯ ಅಭ್ಯರ್ಥಿ" ಎಂದು ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹೇಳಿದ್ದಾರೆ.
ಏತನ್ಮಧ್ಯೆ, ರಾಮಸ್ವಾಮಿ ಅವರು ಹಲವಾರು ವಿಷಯಗಳಲ್ಲಿ ತಮ್ಮ ನೇರವಂತಿಕೆಯನ್ನು ತೋರ್ಪಡಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಅವರು ಅಮೆರಿಕಕ್ಕೆ ಚೀನಾ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಕರೆದಿದ್ದಾರೆ ಮತ್ತು ತಾವು ಅಧಿಕಾರಕ್ಕೆ ಬಂದಲ್ಲಿ ಬೀಜಿಂಗ್ನೊಂದಿಗಿನ ಸಂಬಂಧಕ್ಕೆ ಸಂಪೂರ್ಣ ಅಂತ್ಯ ಹಾಡುವುದಾಗಿ ಘೋಷಿಸಿದ್ದಾರೆ. ಪೆಸಿಫಿಕ್ ವಲಯದಲ್ಲಿ ಮತ್ತೆ ಸಂಪೂರ್ಣವಾಗಿ ವ್ಯಾಪಾರವನ್ನು ಪ್ರಾರಂಭಿಸುವುದಾಗಿ ಮತ್ತು ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾದಂಥ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಮಸ್ವಾಮಿ, "ಕ್ಸಿ ಜಿನ್ ಪಿಂಗ್ ಸರ್ವಾಧಿಕಾರಿಯಾಗಿದ್ದಾರೆ ಮತ್ತು ಚೀನಾ ಅಮೆರಿಕಕ್ಕೆ ಬಹುದೊಡ್ಡ ಅಪಾಯವಾಗಿದೆ. ಚೀನಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ನಾನು ಸ್ಪಷ್ಟತೆಯನ್ನು ಹೊಂದಿರುವ ಅಭ್ಯರ್ಥಿಯಾಗಿದ್ದೇನೆ. ಅದೇ ನಮ್ಮ ನೀತಿಯ ಮೊದಲ ಹೆಜ್ಜೆಯಾಗಿದೆ." ಎಂದು ಅವರು ಹೇಳಿದರು. ಚೀನಾದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿತಗೊಳಿಸುತ್ತೇನೆ ಮತ್ತು ಬೀಜಿಂಗ್ ಜೊತೆಗೆ ವ್ಯವಹಾರ ಮಾಡದಂತೆ ಯುಎಸ್ ಕಂಪನಿಗಳನ್ನು ನಿಷೇಧಿಸುತ್ತೇನೆ ಎಂದು ಅವರು ತಿಳಿಸಿದರು.