ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಎಲೋನ್ ಮಸ್ಕ್ ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವಿಟರ್ ಖರೀದಿಸಿದಾಗಿನಿಂದಲೂ ಅತಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಟ್ವಿಟರ್ ಬಗ್ಗೆ ಸಂಬಂಧಿಸಿದ ಹೊಸ ಘೋಷಣೆಗಳು ಮತ್ತು ಹೊಸ ಬದಲಾವಣೆಗಳನ್ನು ಮಾಡುತ್ತಲೇ ಬರುತ್ತಾ ಗಮನ ಸೆಳೆಯುತ್ತಿದ್ದಾರೆ. ಇದೀಗ ವಿಚಿತ್ರವಾದ ಘೋಷಣೆ ಮಾಡಿದ್ದು, ಟ್ವಿಟರ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯನ್ನಾಗಿ ಶ್ವಾನವನ್ನು ನೇಮಿಸಿಕೊಂಡಿರುವುದಾಗಿ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.
ಕಳೆದ ವರ್ಷ ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ಗೆ ಎಲೋನ್ ಮಸ್ಕ್ ಖರೀದಿಸಿದ್ದಾರೆ. ಇದರ ನಂತರದಿಂದ ಟ್ವಿಟರ್ ಉದ್ಯೋಗಿಗಳ ಬದಲಾವಣೆ ಮತ್ತು ಬ್ಲೂ ವೆರಿಫಿಕೇಶನ್ ವಿಷಯವಾಗಿ ಸದಾ ಸುದ್ದಿಯಲ್ಲೇ ಇದ್ದಾರೆ. ಈ ಹಿಂದೆ ಟ್ವಿಟರ್ಗೆ ಹೊಸ ಸಿಇಒಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ಈ ಮೂಲಕ ತಾವು ಸಿಇಒ ಹುದ್ದೆ ತೊರೆಯಲು ಬಯಸಿರುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಈಗ ಹೊಸ ಸಿಇಒ ಹುಡುಕಾಟ ಮುಗಿದಂತಿದ್ದು, ಟ್ವಿಟರ್‌ನ ಮುಂದಿನ ಸಿಇಒ ಬಗ್ಗೆ ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ.
ಟ್ವಿಟರ್‌ನ ಹೊಸ ಸಿಇಒ ಶ್ವಾನ: ಬಿಲಿಯನೇರ್ ಎಲೋನ್ ಮಸ್ಕ್ ಪ್ರಕಾರ, ಟ್ವಿಟರ್‌ನ ಹೊಸ ಸಿಇಒ ಅವರ ಸಾಕು ಶ್ವಾನವೇ ಹೊರತು ಮನುಷ್ಯರಲ್ಲ. ಈ ಸಿಇಒ ಹೆಸರು ಫ್ಲೋಕಿ. ಈ ಬಗ್ಗೆ ಖುದ್ದು ಎಲೋನ್ ಮಸ್ಕ್ ತಮ್ಮ ಸಾಕು ಶ್ವಾನ ಫ್ಲೋಕಿ ಸಮೇತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಒಂದು ಕುರ್ಚಿಯ ಮೇಲೆ ಶ್ವಾನ ಕುಳಿತಿದ್ದು, ಅದಕ್ಕೆ ಸಿಇಒ ಎಂದು ಬರೆದಿರುವ ಟಿ-ಶರ್ಟ್ ತೊಡಗಿಸಲಾಗಿದೆ. ಇದೇ ರೀತಿಯಾಗಿ ಶ್ವಾನದ ಬೇರೆ-ಬೇರೆ ಪೋಟೋಗಳನ್ನು ಎಲೋನ್ ಮಸ್ಕ್ ಹಂಚಿಕೊಂಡಿದ್ದಾರೆ.