ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ):ಪ್ಲಾಟಿನಂ ಗಣಿಯಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದಾಗ ಏಕಾಏಕಿ ಎಲಿವೇಟರ್ ಕುಸಿದು ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿ, 75 ಜನ ಗಾಯಗೊಂಡ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಸೋಮವಾರ ಸಂಜೆ ನಡೆದಿದೆ. ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಣಿ ನಿರ್ವಾಹಕರು ತಿಳಿಸಿದ್ದಾರೆ.
ರಸ್ಟೆನ್‌ಬರ್ಗ್‌ನಲ್ಲಿರುವ ಇಂಪಾಲಾ ಪ್ಲಾಟಿನಂ ಹೋಲ್ಡಿಂಗ್ಸ್ (ಇಂಪ್ಲಾಂಟ್ಸ್) ಕಂಪನಿಯ ಗಣಿಯಲ್ಲಿ ಈ ದುರಂತ ಸಂಭವಿಸಿದೆ. ಕಾರ್ಮಿಕರು ಪಾಳಿ ಮುಗಿದ ಬಳಿಕ ಎಲಿವೇಟರ್ನಲ್ಲಿ ಬರುತ್ತಿದ್ದಾಗ ಅದು ದಿಢೀರ್ ಕುಸಿದು ಬಿದ್ದಿದೆ. ಪರಿಣಾಮ ಅದರಲ್ಲಿದ್ದ 11 ಜನ ಕಾರ್ಮಿಕರು ಮೃತಪಟ್ಟು, 75 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಇಂಪಾಲಾ ಪ್ಲಾಟಿನಂ ಸಿಇಒ ನಿಕೊ ಮುಲ್ಲರ್ ಪ್ರತಿಕ್ರಿಯಿಸಿ, ಇಂಪ್ಲಾಂಟ್ಸ್ ಗಣಿ ಇತಿಹಾಸದಲ್ಲೇ ಇದೊಂದು ಕರಾಳ ದಿನವಾಗಿದೆ. ಲಿಫ್ಟ್ ಕುಸಿದು ಬೀಳಲು ಕಾರಣವೇನು ಎಂಬುದರ ಕುರಿತು ಈಗಾಗಲೇ ತನಿಖೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾವು ಪ್ಲಾಟಿನಂನ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. 2022ರಲ್ಲಿ ಸಂಭವಿಸಿದ ಗಣಿಗಾರಿಕೆಗೆ ಸಂಬಂಧಿಸಿದ ದುರ್ಘಟನೆಗಳಲ್ಲಿ ಸುಮಾರು 49 ಮಂದಿ ಸಾವಿಗೀಡಾಗಿದ್ದರು. ಇದರ ಹಿಂದಿನ ವರ್ಷ 74 ಜನ ಕಾರ್ಮಿಕರು ಮೃತಪಟ್ಟಿದ್ದರು. ದಕ್ಷಿಣ ಆಫ್ರಿಕಾದ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಗಣಿಗಾರಿಕೆ ಅಪಘಾತಗಳಿಂದ ಕಳೆದ ಎರಡು ದಶಕಗಳಲ್ಲಿ ಸಾವುಗಳ ಸಂಖ್ಯೆ ಕಡಿಮೆಯಾಗಿದೆ. 2000 ರಿಂದ ಈಚೆಗೆ ಸುಮಾರು 300 ಮಂದಿ ಅಸುನೀಗಿದ್ದಾರೆ.